– ಡಾ. ಎ. ಸೂರ್ಯ ಪ್ರಕಾಶ್, ಹಿರಿಯ ಪತ್ರಕರ್ತ, ಪ್ರಧಾನ ಮಂತ್ರಿಗಳ ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಸದಸ್ಯ, ನವದೆಹಲಿ
ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಜಾಗತಿಕ ನಾಯಕರು ಭಾರತದ ರಾಜಧಾನಿ ನವದೆಹಲಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಪ್ರಮುಖ ನಾಯಕರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್, ಬ್ರೆಜಿಲ್ ಅಧ್ಯಕ್ಷ ಲುಲಾ ಡಾ ಸಿಲ್ವಾ ಮತ್ತು ಯುರೋಪಿಯನ್ ಕಮಿಷನ್ನ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಸೇರಿದ್ದಾರೆ. 2026ರ ಮಾರ್ಚ್ ಮೊದಲ ವಾರದಲ್ಲಿ ಫಿನ್ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಭೇಟಿ ನೀಡಿದ ತೀರಾ ಇತ್ತೀಚಿನ ನಾಯಕ. ಜಾಗತಿಕ ಶಾಂತಿಯನ್ನು ಕಾಪಾಡುವಲ್ಲಿ ಮತ್ತು ಅನೇಕ ಸಂಘರ್ಷಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಭಾರತದ ಪ್ರಾಮುಖ್ಯತೆಯ ಬಗ್ಗೆ ಇವರೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಬೇಕು ಎಂದು ಹಲವು ಜಾಗತಿಕ ನಾಯಕರು ಒತ್ತಾಯಿಸುತ್ತಿದ್ದಾರೆ. ಭಾರತವು ಭದ್ರತಾ ಮಂಡಳಿಯಲ್ಲಿ ಸ್ಥಾನ ಹೊಂದಿರಬೇಕು ಎಂದು ಫಿನ್ಲ್ಯಾಂಡ್ ಅಧ್ಯಕ್ಷರು ಹೇಳಿದ್ದಾರೆ. ಭಾರತಕ್ಕೆ ಈ ಸ್ಥಾನ ನೀಡುವುದು ಅತ್ಯಂತ ಮಹತ್ವದ್ದು ಎಂದು ಅವರು ಹೇಳಿದರು. ಸದಸ್ಯತ್ವ ಮತ್ತು ಜವಾಬ್ದಾರಿಗಳೆರಡರ ದೃಷ್ಟಿಯಿಂದ ವಿಶ್ವಸಂಸ್ಥೆ ಮತ್ತು ಇತರ ಜಾಗತಿಕ ಸಂಸ್ಥೆಗಳ ಸುಧಾರಣೆಗೆ ಸ್ಟಬ್ ಕರೆ ನೀಡಿದ್ದಾರೆ.
ಇಂದಿನ ಭೌಗೋಳಿಕ ರಾಜಕೀಯ ನೈಜತೆಗಳನ್ನು ಪ್ರತಿಬಿಂಬಿಸುವಂತೆ ಜಾಗತಿಕ ಸಂಸ್ಥೆಗಳನ್ನು ಸುಧಾರಿಸಬೇಕು ಎಂದು ಹೇಳಿದ ಅವರು, ಹೊಸ ಜಾಗತಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರತಿಪಾದಿಸಿದರು. ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವದಿಂದ ಭಾರತವನ್ನು ಹೊರಗಿಟ್ಟಿರುವ ಬಗ್ಗೆ ಜಾಗತಿಕ ನಾಯಕರು ಕಳೆದ 10-15 ವರ್ಷಗಳಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೂ, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಈ ಧ್ವನಿಗಳು ಜೋರಾಗಿವೆ. ಅವರು ಮೋದಿಯವರನ್ನು ಮತ್ತು ಅವರೊಂದಿಗೆ ಭಾರತವನ್ನು ಒಂದು ಪ್ರಮುಖ ಆಟಗಾರನನ್ನಾಗಿ ನೋಡುತ್ತಿದ್ದಾರೆ. ಸ್ಟಬ್ ಗಮನಿಸಿದಂತೆ, ಎಲ್ಲರೊಂದಿಗೂ ಸ್ಥಿರವಾದ ಸಂಬಂಧವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಮೋದಿಯವರ ವಿಶೇಷತೆ. ಭಾರತದ ರಾಜತಾಂತ್ರಿಕ ಕೌಶಲ್ಯಗಳು ಮತ್ತು ಒಟ್ಟೊಟ್ಟಿಗೆ ಅನೇಕ ದೇಶಗಳೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳುವ ಅದರ ಸಾಮರ್ಥ್ಯವನ್ನು ಅವರು ಗಮನಾರ್ಹವಾಗಿ ಶ್ಲಾಘಿಸಿದರು. ಆದ್ದರಿಂದ ಭಾರತವು ‘ಯಾರೊಂದಿಗೂ ಮಾತನಾಡಬಲ್ಲ’ ಕೆಲವೇ ದೇಶಗಳಲ್ಲಿ ಒಂದು ಎನ್ನುವುದನ್ನು ಬಹುತೇಕ ಎಲ್ಲಾ ಜಾಗತಿಕ ನಾಯಕರೂ ಗುರುತಿಸಿದಂತಿದೆ.
ಜಾಗತಿಕ ವೇದಿಕೆಯಲ್ಲಿ ಬೆಳೆಯುತ್ತಿರುವ ಭಾರತದ ಘನತೆಯನ್ನು ಪ್ರಧಾನಿ ಮೋದಿಯವರ ವಿದೇಶ ಪ್ರವಾಸಗಳು ಮತ್ತು ಪ್ರಮುಖ ನಾಯಕರೊಂದಿಗಿನ ಅವರ ಸಭೆಗಳಿಂದ ಅಳೆಯಬಹುದು. ಕಳೆದ ಕೆಲವು ತಿಂಗಳುಗಳಲ್ಲಿ ಅವರು ಜೋರ್ಡಾನ್, ಇಥಿಯೋಪಿಯಾ, ಓಮನ್, ದಕ್ಷಿಣ ಆಫ್ರಿಕಾ, ಮಲೇಷ್ಯಾ, ಭೂತಾನ್ ಮತ್ತು ತೀರಾ ಇತ್ತೀಚೆಗೆ ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಮೋದಿ ಅವರ ಇಸ್ರೇಲ್ ಭೇಟಿ ಮುಗಿದ ಕೂಡಲೇ (ಫೆಬ್ರವರಿ 25 ಮತ್ತು 26) ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದವು. ಮೊದಲು ಮೋದಿಯವರ ಭೇಟಿ ಮುಗಿದು ಅವರು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಕಾಯುತ್ತಿದ್ದು ನಂತರ ಯುದ್ಧವನ್ನು ಘೋಷಿಸಿದ್ದಾರೋ ಎನ್ನುವಂತಿತ್ತು ಈ ಅವಧಿಯ ಬೆಳವಣಿಗೆಗಳು. ಈ ಭೇಟಿಯ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತ ಮತ್ತು ವಿಶ್ವದಾದ್ಯಂತ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು. ಮೋದಿಯವರನ್ನು ‘ಇಸ್ರೇಲ್ನ ಆಪ್ತಮಿತ್ರ’ ಮತ್ತು ವಿಶ್ವ ವೇದಿಕೆಯಲ್ಲಿಯೂ ಅವರು ಶ್ರೇಷ್ಠ ನಾಯಕ ಎಂದು ಬಣ್ಣಿಸಿದರು. ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮೋದಿಯವರನ್ನು ನೆತನ್ಯಾಹು ಆಹ್ವಾನಿಸಿದರು. ಮೋದಿಯವರು ಅಲ್ಲಿ ಮಾಡಿದ ಭಾಷಣವು ‘ಅತ್ಯಂತ ಭಾವನಾತ್ಮಕವಾದದ್ದು’ ಎಂದು ಬಣ್ಣಿಸಿದರು. ‘ನೆಸೆಟ್ನಲ್ಲಿ ನಿಮ್ಮ ಭಾಷಣದ ನಂತರ ಕಣ್ಣು ತೇವವಾಗದ ಇಸ್ರೇಲಿಗರು ಯಾರೂ ಇರಲಿಲ್ಲ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಶ್ರೇಷ್ಠ ಕಾರ್ಯಗಳಲ್ಲಿ ಒಂದೆಂದರೆ, ನೆಹರು-ಗಾಂಧಿ ಕುಟುಂಬವು ಹಲವು ದಶಕಗಳಿಂದ ಹಠಮಾರಿತನದಿಂದ ವಿರೋಧಿಸುತ್ತಿದ್ದ ಇಸ್ರೇಲ್ನೊಂದಿಗಿನ ಭಾರತದ ಸಂಬಂಧವನ್ನು ದೃಢವಾಗಿ ಪುನಃಸ್ಥಾಪಿಸಿದ್ದು. ಇಸ್ರೇಲ್ನಲ್ಲಿ ಬಹುಸಂಖ್ಯಾತರಾಗಿರುವ ಯಹೂದಿಗಳೊಂದಿಗೆ ಬಹುಪಾಲು ಭಾರತೀಯರು ಸ್ನೇಹಪರ ಭಾವನೆಗಳನ್ನು ಹೊಂದಿದ್ದರೂ, ನೆಹರು-ಗಾಂಧಿಗಳು ಯಹೂದಿ ರಾಷ್ಟ್ರದೊಂದಿಗೆ ಸ್ನೇಹ ಸಂಬಂಧವನ್ನು ಎಂದಿಗೂ ಬಯಸಲಿಲ್ಲ. ಅದು ತಮ್ಮ ವೋಟ್ ಬ್ಯಾಂಕ್ ಆದ ಮುಸ್ಲಿಮರನ್ನು ಕೆರಳಿಸುತ್ತದೆ ಎಂದೇ ಅವರು ಈ ನಿರ್ಧಾರಗಳನ್ನು ಕೈಗೊಂಡಿದ್ದರು. ಇದರ ಪರಿಣಾಮವಾಗಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶವನ್ನಾಳಿದ ಸಮಯದುದ್ದಕ್ಕೂ ಹಲವು ದಶಕಗಳ ಕಾಲ ಭಾರತವು ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಹೊಂದಲೇ ಇಲ್ಲ. ಶೇ.85ಕ್ಕೂ ಹೆಚ್ಚು ಭಾರತೀಯರು, ಪ್ರಮುಖವಾಗಿ ಹಿಂದೂಗಳು, ಯಹೂದಿಗಳ ಕಡೆಗೆ ಸೌಹಾರ್ದಯುತ ಭಾವನೆಗಳನ್ನು ಹೊಂದಿದ್ದರೂ ವಿದೇಶಾಂಗ ನೀತಿಯನ್ನು ಮುಸ್ಲಿಂ ಅಲ್ಪಸಂಖ್ಯಾತರ ದೃಷ್ಟಿಯಿಂದ ಮುನ್ನಡೆಸಲ್ಪಡಲು ಈ ಒಂದು ಕುಟುಂಬವು ಅವಕಾಶ ಮಾಡಿಕೊಟ್ಟಿತ್ತು. ಇಸ್ರೇಲ್ ಕಡೆಗೆ ಈ ಕುಟುಂಬ ಹೊಂದಿದ್ದ ದ್ವೇಷ ಎಷ್ಟಿತ್ತೆಂದರೆ, ಒಂಬತ್ತು ವರ್ಷಗಳ ಹಿಂದೆ ಮೋದಿ ಭೇಟಿ ನೀಡುವವರೆಗೆ ಯಾವ ಪ್ರಧಾನಿಯೂ ಆ ರಾಷ್ಟ್ರಕ್ಕೆ ಭೇಟಿಯನ್ನೇ ನೀಡಿರಲಿಲ್ಲ. ಪ್ರಧಾನಿ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಈ ತಪ್ಪನ್ನು ಸರಿಪಡಿಸಿದರು ಮತ್ತು ಈ ಮೈತ್ರಿಯಿಂದ ಎರಡೂ ದೇಶಗಳಿಗೆ ಹೆಚ್ಚಿನ ಲಾಭವೂ ಆಯಿತು. ಭಾರತದ ಪಾಲಿಗೆ ಈ ಮೈತ್ರಿಯು ಭಾರತದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿದೆ. ಇಸ್ರೇಲ್ನ ಶಸ್ತ್ರಾಸ್ತ್ರ ರಫ್ತಿನ ಮೂರನೇ ಒಂದು ಭಾಗಕ್ಕೂ ಹೆಚ್ಚು ಭಾರತಕ್ಕೆ ಬರುತ್ತದೆ. ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಇಸ್ರೇಲ್ ಅವಕಾಶ ನೀಡಿದೆ. 1992ರಲ್ಲಿ ಪ್ರಧಾನಿಯಾದ ನಂತರ ಆ ದೇಶದೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿ ಇಸ್ರೇಲ್ನ ಏಕಾಂಗಿತನವನ್ನು ಕೊನೆಗೊಳಿಸಿದ ಶ್ರೇಯ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಸಲ್ಲಬೇಕು. ಆ ಸಮಯದಲ್ಲೇ ನವದೆಹಲಿಯ ಲೆ ಮೆರಿಡಿಯನ್ ಹೋಟೆಲ್ನಲ್ಲಿ ಇಸ್ರೇಲ್ ತನ್ನ ರಾಜತಾಂತ್ರಿಕ ಕಚೇರಿಯನ್ನು ತೆರೆದಿದ್ದು.
ಒಂದು ಕಡೆ ಅಮೆರಿಕ-ಇಸ್ರೇಲ್ ಮತ್ತು ಇನ್ನೊಂದು ಕಡೆ ಇರಾನ್ ನಡುವಿನ ಪ್ರಸ್ತುತ ಯುದ್ಧವನ್ನು ಭಾರತ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಗಮನಹರಿಸಬೇಕಾಗಿದೆ. ಮಧ್ಯಪ್ರಾಚ್ಯ ಮತ್ತು ಅರಬ್ ಜಗತ್ತು ಶತಮಾನಗಳಿಂದ ಸಂಘರ್ಷದಲ್ಲಿ ಸಿಲುಕಿರುವುದು ನಿಜಕ್ಕೂ ದುರದೃಷ್ಟಕರ. ಆ ಪ್ರದೇಶದ ಹೆಚ್ಚಿನ ಇಸ್ಲಾಮಿಕ್ ರಾಷ್ಟ್ರಗಳು ಬಹಳ ವರ್ಷಗಳಿಂದ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ನಿಂತಿದ್ದವು. ಅಮೆರಿಕವು ಇಸ್ರೇಲ್ ಪರವಾಗಿ ನಿಲ್ಲುತ್ತಲೇ ಈ ಪ್ರದೇಶದಲ್ಲಿ ರಾಜಕೀಯ ನಡೆಯನ್ನು ಇರಿಸಿತು. ಯಾವುದೇ ಸಮಯದಲ್ಲಿ ಸೋವಿಯತ್ ಒಕ್ಕೂಟ ಮತ್ತು ತನ್ನ ‘ಶತ್ರುಗಳ’ ವಿರುದ್ಧ ಹೋರಾಡಲು ಅನೇಕ ಭಯೋತ್ಪಾದಕ ಸಂಘಟನೆಗಳನ್ನು ಹುಟ್ಟುಹಾಕಿತು. ಜಲಸಂಧಿಯನ್ನು ದಾಟುವ ಹಡಗುಗಳಿಗೆ ವಿಮೆ ಮಾಡಲು ಸಿದ್ಧರಿಲ್ಲ ಎಂದು ವಿಮಾ ಕಂಪನಿಗಳು ಹೇಳಿದ್ದರಿಂದ, ಇರಾನ್ ಮೇಲೆ ಅಮೆರಿಕದ ದಾಳಿಯ ನಂತರ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರವು ತೀವ್ರವಾಗಿ ಬಾಧಿತವಾಗಿದೆ. ಇದು ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಇರಾಕ್ ಮತ್ತು ಇರಾನ್ ಸೇರಿದಂತೆ ಇಡೀ ಕೊಲ್ಲಿಯ ತೈಲ ರಫ್ತುದಾರರ ಮೇಲೆ ಪರಿಣಾಮ ಬೀರಿದೆ. ಹಡಗುಗಳು ಹಾರ್ಮುಜ್ ಮೂಲಕ ಸಾಗದಿರುವುದರಿಂದ, ಇರಾನ್ನ ತೈಲ ರಫ್ತಿಗೆ ತೀವ್ರ ಹೊಡೆತ ಬಿದ್ದಿದೆ. ಇದು ಇರಾನ್ನ ಆರ್ಥಿಕತೆ ಮತ್ತು ಯುದ್ಧವನ್ನು ಎದುರಿಸುವ ಶಕ್ತಿಯ ಮೇಲೆಯೂ ಪರಿಣಾಮ ಬೀರುತ್ತದೆ.
ಏತನ್ಮಧ್ಯೆ, ಮೋದಿಯವರ ನೇತೃತ್ವದಲ್ಲಿ ಭಾರತವು ತನ್ನ ತೈಲ ಆಮದಿನ ಮೂಲಗಳನ್ನು ಕೊಲ್ಲಿ ರಾಷ್ಟ್ರಗಳು, ಇರಾನ್ ಮತ್ತು ಇರಾಕ್ನಿಂದ ರಷ್ಯಾದವರೆಗೆ ಬಹಳ ಬುದ್ಧಿವಂತಿಕೆಯಿಂದ ವಿಸ್ತಾರಗೊಳಿಸಿದೆ. ಭಾರತವು ತನ್ನ ತೈಲದ ಅವಶ್ಯಕತೆಯ ಶೇ.85ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಈ ಸಮಯದಲ್ಲಿ ರಷ್ಯಾದಿಂದ ಆಮದನ್ನು ಹೆಚ್ಚಿಸಬೇಕಾಗುತ್ತದೆ.
ಇರಾನ್ ಕ್ಷಿಪಣಿಗಳು ಸೌದಿ ಅರೇಬಿಯಾ, ಯುಎಇ, ಕತಾರ್, ಓಮನ್ ಮತ್ತು ಬಹ್ರೇನ್ ಮೇಲೆ ಅಪ್ಪಳಿಸಿದಾಗ ಭಾರತವು ಈ ದಾಳಿಗಳನ್ನು ಖಂಡಿಸಿತು. ನರೇಂದ್ರ ಮೋದಿ ಅವರು ಕೂಡಲೇ ಸೌದಿ ಅರೇಬಿಯಾ ಮತ್ತು ಬಹ್ರೇನ್ನ ನಾಯಕರೊಂದಿಗೆ ಮಾತನಾಡಿದರು ಮತ್ತು ಕೊಲ್ಲಿ ರಾಷ್ಟ್ರಗಳನ್ನು ಈ ರೀತಿ ಇರಾನ್ ಗುರಿಯಾಗಿಸುವುದನ್ನು ಭಾರತವು ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು. ಮೋದಿ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ ಅವರೊಂದಿಗೂ ಮಾತನಾಡಿದರು. ಸಂಘರ್ಷ ಉಲ್ಬಣಗೊಳ್ಳುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಸಂಯಮ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.
9 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಜೀವನೋಪಾಯವನ್ನು ಕಂಡುಕೊಂಡಿರುವ ಕೊಲ್ಲಿ ರಾಷ್ಟ್ರಗಳೊಂದಿಗೆ ಭಾರತವು ಬಲವಾದ ಸಂಬಂಧವನ್ನು ಕಾಯ್ದುಕೊಂಡಿದ್ದರೂ, ದಶಕಗಳಿಂದ ಈ ಇಸ್ಲಾಮಿಕ್ ರಾಷ್ಟ್ರಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಇಸ್ರೇಲ್ನೊಂದಿಗಿನ ತನ್ನ ಸಂಬಂಧವನ್ನೂ ಅದು ಬಲಪಡಿಸಿದೆ. ಇದು ನಿಜಕ್ಕೂ ಅದ್ಭುತ ರಾಜತಾಂತ್ರಿಕತೆ. ಈಗ ಅರಬ್ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಸ್ತುತ ಯುದ್ಧದಲ್ಲಿ, ಅದರಲ್ಲೂ ಇರಾನ್ನ ಕ್ಷಿಪಣಿ ದಾಳಿಯ ನಂತರ ಇಸ್ರೇಲ್ ಮತ್ತು ಸುನ್ನಿ ನಾಯಕರ ಆಡಳಿತವಿರುವ ಹೆಚ್ಚಿನ ಇಸ್ಲಾಮಿಕ್ ದೇಶಗಳು ಒಂದೇ ಕಡೆ ಇರುವುದನ್ನು ಕಾಣಬಹುದು, ಇದು ನಿಜಕ್ಕೂ ವಿಚಿತ್ರ ಸನ್ನಿವೇಶ. ಹೀಗಾಗಿ, ಇಸ್ರೇಲ್ನೊಂದಿಗಿನ ಭಾರತದ ಒಡನಾಟವು ಅರಬ್ ದೇಶಗಳೊಂದಿಗಿನ ತನ್ನ ಸಂಬಂಧಗಳಿಗೆ ಧಕ್ಕೆ ತರುವುದಿಲ್ಲ ಎಂದು ನರೇಂದ್ರ ಮೋದಿ ಖಚಿತಪಡಿಸಿದ್ದಾರೆ. ಭಾರತದ ರಾಜತಾಂತ್ರಿಕತೆಯ ಪರಿಣಾಮವಾಗಿರಲಿ ಅಥವಾ ಇನ್ನೇನೇ ಆಗಿರಲಿ, ತನ್ನ ಕ್ಷಿಪಣಿಗಳ ದಾಳಿಗೆ ತುತ್ತಾದ ಅರಬ್ ರಾಷ್ಟ್ರಗಳ ಬಳಿ ಇರಾನ್ನ ಹಂಗಾಮಿ ನಾಯಕ ‘ಕ್ಷಮೆಯಾಚಿಸಿದ್ದಾನೆ’ ಮತ್ತು ಯಾವುದೇ ದೇಶವು ತನ್ನ ಮೇಲೆ ದಾಳಿ ಮಾಡುವವರೆಗೂ ಇರಾನ್ ದಾಳಿ ಮಾಡುವುದಿಲ್ಲ ಎಂದು ಹೇಳಿದ್ದಾನೆ ಎನ್ನುವುದಂತೂ ಸತ್ಯ.
ಇದೆಲ್ಲದರ ಜೊತೆಗೆ ಭಾರತವು ಇರಾನ್ ಅನ್ನೂ ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಇರಾನ್ನೊಂದಿಗಿನ ತನ್ನ ಹಳೆಯ ಸಂಬಂಧಗಳನ್ನು ಮುಂದುವರಿಸಿದೆ. ಅಮೆರಿಕ-ಇಸ್ರೇಲ್ ಜಂಟಿ ಕ್ಷಿಪಣಿ ದಾಳಿಯಲ್ಲಿ ಹತ್ಯೆಗೀಡಾದ ಇರಾನ್ ನಾಯಕ ಅಲ್ ಖಮೇನಿ ನಿಧನಕ್ಕೆ ಭಾರತ ಸಂತಾಪ ಸೂಚಿಸಿದೆ. ನವದೆಹಲಿಯ ಇರಾನ್ ರಾಯಭಾರ ಕಚೇರಿಯಲ್ಲಿ ಭಾರತ ಸರ್ಕಾರದ ಪರವಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಂತಾಪ ಸೂಚಕ ಪುಸ್ತಕಕ್ಕೆ ಸಹಿ ಹಾಕಿಬಂದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಜಲಾಂತರ್ಗಾಮಿಯಿಂದ ದಾಳಿಗೊಳಗಾದಾಗ ಇರಾನ್ ಹಡಗಿನಿಂದ ಬಂದ ಅಪಾಯದ ಸಂಕೇತಗಳಿಗೆ ಸ್ಪಂದಿಸುವ ಮೂಲಕ ಭಾರತವು ತನ್ನ ಮಾನವೀಯ ಜವಾಬ್ದಾರಿಗಳನ್ನು ಸಹ ನಿರ್ವಹಿಸಿದೆ. ಇದೇ ಸಮಯದಲ್ಲಿ ಮತ್ತೊಂದು ಇರಾನ್ ಹಡಗು ಕೊಚ್ಚಿಯಲ್ಲಿ ಲಂಗರು ಹಾಕಲು ಸಹ ಭಾರತ ಅನುಮತಿ ನೀಡಿದೆ.
ಇಲ್ಲಿ ಇನ್ನೊಂದು ಮುಖ್ಯ ವಿಷಯವಿದೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಿದರೆ ಭಾರತದ ಮೇಲೆ ಶೇ.25ರಷ್ಟು ಹೆಚ್ಚಿನ ಟ್ಯಾರಿಫ್ ಹೇರುವುದಾಗಿ 2025ರ ಕೊನೆಯ ತ್ರೈಮಾಸಿಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ಘೋಷಿಸಿದ್ದರು. ಆದರೆ ಈ ಮಾತಿಗೆ ಬಗ್ಗದ ಭಾರತವು ಯುರೋಪಿಯನ್ ಒಕ್ಕೂಟದೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡ ನಂತರ ಅಮೆರಿಕ ತನ್ನ ಧ್ವನಿಯನ್ನು ತಗ್ಗಿಸಿತು ಮತ್ತು ತ್ವರಿತವಾಗಿ ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸಿಕೊಂಡಿತು. ಭಾರತದ ಅದ್ಭುತ ರಾಜತಾಂತ್ರಿಕ ನಡೆಗಳು, ಅಮೆರಿಕವು ತನ್ನ ಕಡೆಗಿನ ತನ್ನ ನಿಲುವನ್ನು ಮೃದುಗೊಳಿಸುವಂತೆ ಮಾಡಿದೆ. ಸರಕು ಪೂರೈಕೆಯನ್ನು ಸುಲಭಗೊಳಿಸುವ ಸಲುವಾಗಿ ಅಂತರರಾಷ್ಟ್ರೀಯ ಜಲಗಡಿಯಲ್ಲಿರುವ ರಷ್ಯಾದ ತೈಲವನ್ನು ಭಾರತ ಖರೀದಿಸಬಹುದು ಎಂದು ಅಮೆರಿಕ ಈಗ ಘೋಷಿಸಿದೆ. ಇದರ ಜೊತೆಗೆ, ಭವಿಷ್ಯದಲ್ಲಿ ಭಾರತವು ರಷ್ಯಾದ ತೈಲದ ಬದಲಿಗೆ ಅಮೇರಿಕನ್ ತೈಲವನ್ನು ಬಳಸುತ್ತದೆ ಎಂಬ ನಂಬಿಕೆಯಿದೆ, ಆದರೆ ಪ್ರಪಂಚದಾದ್ಯಂತ ತೈಲದ ತಾತ್ಕಾಲಿಕ ಕೊರತೆಯನ್ನು ನಿವಾರಿಸಲು ಭಾರತವು ಮುಂದಿನ ಒಂದು ತಿಂಗಳವರೆಗೆ ರಷ್ಯಾದಿಂದ ಖರೀದಿಯನ್ನು ಮುಂದುವರಿಸಬಹುದು ಎಂದು ಅಮೆರಿಕ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿಕೊಂಡಿರುವುದೇ ಇದಕ್ಕೆ ಸಾಕ್ಷಿ.
ಮೋದಿಯವರು ಅಮೆರಿಕನ್ನರಿಗೆ ಸಂಪೂರ್ಣ ಶರಣಾಗಿದ್ದಾರೆ ಎಂದು ಆರೋಪಿಸುತ್ತಿದ್ದ ಭಾರತದ ವಿರೋಧ ಪಕ್ಷದ ನಾಯಕರಿಗೆ ಇದು ತಕ್ಕ ತಿರುಗೇಟು ಸಹ ಆಗಿದೆ.
