- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ನ ‘ದುರಂಧರ್ – ದಿ ರಿವೆಂಜ್’ ಚಲನಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ 400 ಕೋಟಿಗೂ ಅಧಿಕ ಗಳಿಸಿ ಬಾಕ್ಸ್ ಆಫೀಸ್ನ ಬಾಸ್ ಆಗಿ ಮಾರ್ಪಟ್ಟಿತು. ಬರೋಬ್ಬರಿ 4 ಗಂಟೆಗಳ ಸುದೀರ್ಘ ಚಿತ್ರವು ಎಲ್ಲಿಯೂ ವಿಚಲಿತರಾಗದೆ ನೋಡುವಂತೆ ಕಥೆ, ಅಭಿನಯ, ಮೇಕಿಂಗ್, ಡೈಲಾಗ್ ಎಲ್ಲದರ ಮೂಲಕ ಪ್ರೇಕ್ಷಕರ ಗಮನವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಯುವ ನಿರ್ದೇಶಕ ಆದಿತ್ಯ ಧರ್ ನಿರ್ದೇಶನ ಮತ್ತು ರಣವೀರ ಸಿಂಗ್ ಅವರ ಅದ್ಭುತ ಅಭಿನಯ ಚಿತ್ರವನ್ನು ಮುಗಿಲೆತ್ತರಕ್ಕೇರಿಸಿದೆ. ಈ ಚಿತ್ರದ ಫೊಟೋಗಳು, ವಿಡಿಯೋ ತುಣುಕುಗಳು, ಮೀಮ್ಸ್ ಗಳು, ಟ್ವಿಟರ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಯೂಟ್ಯೂಬ್ನಂತಹ ಜಾಲತಾಣಗಳಲ್ಲಿ ಧೂಳೆಬ್ಬಿಸಿವೆ. ಸಾಮಾನ್ಯ ಜನರು ಈ ಚಿತ್ರವನ್ನು ಇಂಡಿಯಾಸ್ ಆನ್ಸರ್ ಟು ಗ್ಲೋಬಲ್ ಸಿನಿಮಾ ಎಂದು ವಿಶ್ಲೇಷಿಸಿದ್ದಾರೆ. “ಇದು ಹೊಸ ಭಾರತ, ಈಗ ನಾವು ವೈರಿಗಳ ಮನೆಗೂ ಹೋಗ್ತೀವಿ, ಅವರನ್ನು ಹೊಡೆದೂ ಬರ್ತೇವೆ” ಎನ್ನುವ ಡೈಲಾಗ್ ಮತ್ತು “ಗಾಯಗೊಂಡಿದ್ದೇನೆ, ಹೀಗಾಗಿ ಘಾತುಕನಾಗಿದ್ದೇನೆ” – ಡೈಲಾಗ್ ಎಲ್ಲೆಡೆ ಮಾರ್ದನಿಸುತ್ತಿವೆ.
ಭಾರತದ ಗೂಢಚಾರಿಕೆ, ದೇಶರಕ್ಷಣೆಯಲ್ಲಿ ಸೈನಿಕರ ಪಾತ್ರ, ಅವರ ಜೀವನದ ಹೋರಾಟ, ನಮ್ಮನ್ನು ಅಸ್ಥಿರಗೊಳಿಸುವ ನಮ್ಮ ನೆರೆಯವರ ಪ್ರಯತ್ನಗಳನ್ನು ವಿಫಲಗೊಳಿಸುವ ಕಥೆಯ ಬಗೆಗೆ ಬೆಳಕು ಚೆಲ್ಲುವ ಈ ಚಿತ್ರವು ಭಾರತದೆಲ್ಲೆಡೆ ಭರ್ಜರಿ ಯಶಸ್ಸು ಕಾಣುತ್ತಿದ್ದು, ಅಮೆರಿಕ, ಯುರೋಪ್ ಸೇರಿದಂತೆ ಬಹುತೇಕ ದೇಶಗಳಲ್ಲಿಯೂ ಬಹುಬೇಡಿಕೆಯ ಚಿತ್ರವಾಗಿ ಮಾರ್ಪಟ್ಟಿದೆ. ಆದರೆ ಪಾಕಿಸ್ತಾನ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಧಾರ್ಮಿಕ ಸೂಕ್ಷ್ಮತೆ ವಿಚಾರವಾಗಿ ಬ್ಯಾನ್ ಮಾಡಲಾಗಿದೆ. IMDbನಲ್ಲಿ 8.3 ಅಂಕ ಗಳಿಸಿ ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ. ಜಾಲತಾಣಗಳಲ್ಲಿ ಬಹುತೇಕ ಸ್ಟೇಟಸ್, ಮೆಸೇಜ್, ರಿಪ್ಲೈಗಳಲ್ಲಿ “ಪೈಸೆ ವಸೂಲ್, ಗೂಸ್ ಬಂಪ್ಸ್ ಎಕ್ಸ್ಪೀರಿಯೆನ್ಸ್, ರೆಕಾರ್ಡ್-ಬ್ರೇಕರ್ ಚಿತ್ರ” ಎಂದು ಬರೆಯಲಾಗಿದೆ. ಹಾಗೆಯೇ ಜಾಲತಾಣಗಳಲ್ಲಿ #Dhurandhar2, #DhurandharTheRevenge, #Dhurandhar2Review, and #AdityaDhar ಎಂಬ ಹ್ಯಾಶ್ಟ್ಯಾಗ್ಗಳ ಭರಾಟೆ ಜೋರಾಗಿದೆ. ಜೊತೆಜೊತೆಗೆ ರಣವೀರ್ ಸಿಂಗ್ ಅವರ ಕೈಬರೆಹದ ಡೈರಿ ಎಲ್ಲೆಡೆ ವೈರಲ್ ಆಗಿದೆ.
ಭಾರತೀಯ ಚಿತ್ರರಂಗದ ದಿಗ್ಗಜರು ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸೂಪರ್ಸ್ಟಾರ್ ರಜನಿಕಾಂತ್ ಈ ಚಿತ್ರವನ್ನು Box Office ka baap, ಎಲ್ಲಾ ಭಾರತೀಯರೂ ನೋಡಲೇಬೇಕಾದ ಚಿತ್ರ ಎಂದರೆ, ರಿಷಬ್ ಶೆಟ್ಟಿ Top-notch performances by every single artist ಎಂದು ಹೊಗಳಿದ್ದಾರೆ. ಅದೇ ರೀತಿ ಬಾಲಿವುಡ್ನ ಪ್ರೀತಿ ಜಿಂಟಾ, ರಾಮ್ ಗೋಪಾಲ್ ವರ್ಮಾ, ಮಧುರ್ ಭಂಡಾರ್ಕರ್, ರಾಕೇಶ್ ರೋಷನ್, ಜಾಹ್ನವಿ ಕಪೂರ್, ಅನುಪಮ್ ಖೇರ್ ಚಿತ್ರದ ಬಗ್ಗೆ ಧನಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ತೆಲುಗಿನ ಅಲ್ಲು ಅರ್ಜುನ್ Patriotism with swag. A film that will make every patriot proud ಎಂದರೆ, ರಾಮ್ ಚರಣ್ Dhurandhar The Revenge is raw, gripping and impactful ಎಂದಿದ್ದಾರೆ. Jr. NTR ಅವರು salutes the makers for delivering a storm to Indian audiences ಎಂದು ಹೊಗಳಿದ್ದಾರೆ. ಹಾಗೆಯೇ ಪ್ರಕಾಶ್ ರಾಜ್, ಕನ್ನಡ ನಟಿ ರಮ್ಯಾ ಸೇರಿದಂತೆ ಕೆಲವು ನಟ-ನಟಿಯರು ಈ ಚಿತ್ರದ ಬಗೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ವಾಮಪಂಥೀಯ ಯೂಟ್ಯೂಬರ್ಸ್ ಗಳು ಈ ಚಿತ್ರವನ್ನು ಪ್ರಾಪೊಗೆಂಡಾ ಚಿತ್ರ, ಬಿಜೆಪಿ ಪಾರ್ಟಿ ಸಮರ್ಥನೆಯ ಚಿತ್ರ ಎಂದು ಜರಿದರೆ, AIMIM’s ಪಕ್ಷವು ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಬೇಡಿಕೆ ಇಟ್ಟಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರದ ನಾಯಕ ನಟ ರಣವೀರ್ ಸಿಂಗ್ ಅವರ ಪತ್ನಿ ದೀಪಿಕಾ ಪಡುಕೋಣೆ ಹಿಂದೆ ದೆಹಲಿಯ JNU ಕಾರ್ಯಕ್ರಮದಲ್ಲಿ ತುಕ್ದೆ ಗ್ಯಾಂಗ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಷ್ಟ್ರವಾದಿಗಳ ಕೆಂಗಣ್ಣಿಗೆ ಗುರಿಯಾಗಿ ವಿವಾದಕ್ಕೊಳಗಾಗಿದ್ದರು. ಈ ಚಿತ್ರದ ವಿರುದ್ಧ ಮಾತನಾಡಿ, ನಿಮ್ಮ ಮೌನ ಮುರಿಯಿರಿ ಎಂದು ವಾಮಪಂಥೀಯರು ಗೋಗರೆಯುತ್ತಿದ್ದರೆ, ಚಿತ್ರದ ಯಶಸ್ಸಿನ ನಂತರ ಈಗ ಎಚ್ಚೆತ್ತಿರುವ ಪಾಕಿಸ್ತಾನದ ರಾಜಕೀಯ ನಾಯಕರು, ಪೊಲೀಸರು ದೇಶಾದ್ಯಂತ ಗೂಢಚಾರಿಗಳಿಗೆ ಹುಡುಕಾಟ ಆರಂಭಿಸಿದ್ದು, ಅದರ ವಿಡಿಯೋ ತುಣುಕುಗಳು ಜಾಲತಾಣದಲ್ಲಿ ವೈರಲ್ ಆಗಿವೆ.
