– ಸಂದೀಪ್ ಮಂಜುನಾಥ್, ಎಂ.ಎಸ್ಸಿ. ಕೃಷಿ, ಹುಣಸೂರು
ಇತ್ತೀಚಿನ ಪ್ರಧಾನ ಮಂತ್ರಿಯವರು ಮನದ ಮಾತು ಕಾರ್ಯಕ್ರಮದಲ್ಲಿ ಭೌಗೋಳಿಕ ಸ್ಥಾನಮಾನ ಪಡೆದ ನಮ್ಮ ರಾಜ್ಯದ ಹೆಮ್ಮೆಯ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ ಮತ್ತು ಬಿಜಾಪುರದ ಇಂಡಿಯ ನಿಂಬೆ ಕುರಿತು ಉಲ್ಲೇಖಿಸುತ್ತಾ ಈ ಎಲ್ಲಾ ಉತ್ಪನ್ನಗಳು ಕರ್ನಾಟಕದಿಂದ ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತಿರುವ ಕುರಿತು ತಿಳಿಸಿದರು. ಭೌಗೋಳಿಕ ಸ್ಥಾನಮಾನ ಎಂದರೆ ಒಂದು ನಿರ್ಧಿಷ್ಟ ಪ್ರದೇಶದಲ್ಲಿ ವಿಶೇಷವಾಗಿ ಬೆಳೆಯುವ ಒಂದು ಬೆಳೆ ಅಥವಾ ಉತ್ಪನ್ನದ ವಿಭಿನ್ನತೆಗನುಗುಣವಾಗಿ ನೀಡುವ ಮಾನದಂಡ. ಆ ನಿರ್ದಿಷ್ಟ ಉತ್ಪನ್ನ ಮತ್ತಾವ ಪ್ರದೇಶದಲ್ಲೂ ಈ ಮಟ್ಟಿನ ಗುಣಮಟ್ಟ ಹೊಂದಿರುವುದಿಲ್ಲ. ಹಾಗಾಗಿ ಅಂತಹ ಬೆಳೆ ಅಥವಾ ಉತ್ಪನ್ನಕ್ಕೆ GI ಭೌಗೋಳಿಕ ಸ್ಥಾನಮಾನ ನೀಡುವ ಮೂಲಕ ಯಾರೆಲ್ಲಾ ಆ ಬೆಳೆ ಬೆಳೆಯುತ್ತಾರೋ ಅಥವಾ ಉತ್ಪನ್ನ ತಯಾರಿಸುತ್ತಾರೋ ಅಂತಹವರಿಗೆ ಉತ್ತಮ ಮಾರುಕಟ್ಟೆ ಮತ್ತು ಗ್ರಾಹಕರಿಗೂ ಉನ್ನತ ಗುಣಮಟ್ಟದ ಉತ್ಪನ್ನ ಖರೀದಿಸಲು ಸಹಾಯ ಮಾಡುತ್ತದೆ. ಕರ್ನಾಟಕದಲ್ಲಿ ಇಂತಹ ಸುಮಾರು 46 ಭೌಗೋಳಿಕ ಸ್ಥಾನಮಾನ ಪಡೆದ ಉತ್ಪನ್ನಗಳಿವೆ. ಇದರ ಸಾಲಿಗೆ ಯಾದಗಿರಿ ಜಿಲ್ಲೆಯ ಎಲೇರಿ ಗ್ರಾಮದಲ್ಲಿ ಬೆಳೆಯುವ ‘ಮುತ್ತಿನಂತ ಎಲೇರಿ ಜೋಳ’ ಸೇರ್ಪಡೆಯಾಗಬೇಕೆಂಬುದು ಅಲ್ಲಿನ ಯುವ ಕೃಷಿಕ ವಿಶ್ವಶಂಕರ್ ಮತ್ತು ಇತರೆ ಪ್ರಗತಿಪರ ರೈತರ ಅಭಿಲಾಷೆಯಾಗಿದೆ.
2023ರಲ್ಲಿ ಎಂ.ಕಾಮ್ ಪದವಿ ಪಡೆದು ಯಾವುದೇ ಕೆಲಸಕ್ಕೆ ಹೋಗದೆ ತಂದೆಯ ಮಾತಿನಂತೆ ಸ್ವಂತ ಊರಿನಲ್ಲಿ ಸಾವಯವ ಕೃಷಿ ಪ್ರಾರಂಭಿಸಿದವರು ವಿಶ್ವಶಂಕರ್. ಚಿಕ್ಕ ವಯಸ್ಸಿನಲ್ಲೇ ಅನೇಕ ಅದ್ಭುತ ಸಾಧನೆ ಮಾಡಿರುವ ಇವರು ಈಗಾಗಲೇ ಕೃಷಿಯಲ್ಲಿ ಹೊಸ ಪ್ರಯೋಗಗಳ ಮೂಲಕ ಗುರುತಿಸಿಕೊಂಡಿದ್ದಾರೆ. ವಿಶ್ವಶಂಕರ್ ಅವರು ಒಟ್ಟು ಜಮೀನಿನಲ್ಲಿ ಅಲ್ಪಾವಧಿ ಬೆಳೆಯಾಗಿ ಜೋಳ, ತೊಗರಿ, ಶೇಂಗಾ, ಸೂರ್ಯಕಾಂತಿ ಬೆಳೆದರೆ ನಿರಂತರ ಆದಾಯಕ್ಕಾಗಿ ಸುಮಾರು ಅರ್ಧ ಎಕರೆಯಲ್ಲಿ ಪಾಲಿ ಹೌಸ್ ನಿರ್ಮಿಸಿ ಸಾವಯವ ರೀತಿ ವೀಳ್ಯದೆಲೆ ಬೆಳೆದು ಹಲವರ ಹುಬ್ಬೇರುವಂತೆ ಮಾಡಿದ್ದಾರೆ. ಬರಡು ಭೂಮಿ ಅಂದರೆ ವೈಜ್ಞಾನಿಕ ರೀತಿಯಲ್ಲಿ ಹೇಳಬೇಕೆಂದರೆ ಜಮೀನಿನ ಸಾವಯವ ಇಂಗಾಲ ಕೇವಲ ಶೇ.0.2 ಮಾತ್ರ ಇದ್ದರೂ ಇಂತಹ ನೆಲವನ್ನು ನಂದನವನ ಮಾಡುವ ಹಾದಿಯಲ್ಲಿದ್ದಾರೆ. ಈಗಾಗಲೇ ಪ್ರತಿ 18-20 ಅಡಿಗೊಂದು ಬಸಿಗಾಲುವೆ (ಟ್ರೆಂಚ್) ತೋಡಿಸಿ ಮಳೆ ನೀರು ಇಂಗುವಂತೆ ಮಾಡಿದ್ದಾರೆ. ಬದುವಿನ ಮೇಲೆ ಹಲವಾರು ಬಗೆಯ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ದೀರ್ಘಾವಧಿ ಬೆಳೆಯಾಗಿ ಮಹಾಘನಿ ಮತ್ತು ಶ್ರೀಗಂಧ ಬೆಳೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯಡಿಯಲ್ಲಿ ತೋಟದಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಾ ಅವುಗಳ ಮಾರಾಟದಿಂದಲೂ ಉತ್ತಮ ಆದಾಯ ಗಳಿಸುತ್ತಾ ಹಳ್ಳಿಯ ಯುವಕರಿಗೆ ಮಾದರಿಯಾಗಿದ್ದಾರೆ ವಿಶ್ವಶಂಕರ್.
ಮುತ್ತಿನಂತ ಎಲೇರಿ ಜೋಳದ ವೈಶಿಷ್ಟ್ಯ
ಉತ್ತರ ಕರ್ನಾಟಕ ಭಾಗದ ಪ್ರಧಾನ ಆಹಾರ ಜೋಳ. ಶತಮಾನಗಳಿಂದ ನಮ್ಮ ಹಿರಿಯರು ಹಲವಾರು ಬಗೆಯ ಜೋಳದ ಪ್ರಭೇದಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆ, ಗುರಮಿಠಕಲ್ ತಾ.ಎಲೇರಿ ಗ್ರಾಮದಲ್ಲಿ ಬೆಳೆಯುವ ಜೋಳ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಮತ್ತು ಬೇಗನೆ ಮಾರಾಟವಾಗುವ ತಳಿಯಾಗಿದೆ. ಎಲೇರಿ ಗ್ರಾಮದ ಸುತ್ತಮುತ್ತ ಬೆಳೆಯುವ ಜೋಳ ಜವಾರಿ ತಳಿಯಾಗಿದ್ದು, ದಶಕಗಳಿಂದ ಇಲ್ಲಿನ ರೈತರು ಇದೇ ಪ್ರಭೇದವನ್ನು ಬೆಳೆಯುತ್ತಿದ್ದಾರೆ. ಎಲೇರಿ ಜೋಳ ನೋಡಲು ಮುತ್ತಿನಂತೆ ಹೆಚ್ಚು ಆಕರ್ಷಕವಾಗಿದ್ದು ಗಾತ್ರದಲ್ಲಿ ಮಿಕ್ಕಜೋಳಕ್ಕಿಂತ ದೊಡ್ಡಾಗಿ ಅಂದರೆ ಸುಮಾರು ಬೆಂಡೆ ಬೀಜದಷ್ಟು ದೊಡ್ಡದಾಗಿರುತ್ತದೆ ಮತ್ತು ಕಾಳುಗಳು ಬಹಳ ಗಟ್ಟಿಯಾಗಿರುತ್ತದೆ. ಇದರಿಂದ ಹಿಟ್ಟು ಮಾಡಿ ರೊಟ್ಟಿ ತಟ್ಟಿದರೆ ರೊಟ್ಟಿ ಬಹಳ ಮೃದುವಾಗಿ, ರುಚಿಯಾಗಿ ಒಂದು ಕಳೆದರೂ ಚೆನ್ನಾಗಿರುತ್ತದೆ.
ಎಲೇರಿ ಗ್ರಾಮದ ಮಣ್ಣು ಹವಾಗುಣ ಜೋಳದ ಮಹತ್ವ ಹೆಚ್ಚಿಸಿದೆ
ಎಲೇರಿ ಗ್ರಾಮದ ಕಪ್ಪು ಮಣ್ಣು ಜೋಳ ಬೆಳೆಯಲು ಬಹಳ ಸೂಕ್ತವಾಗಿದ್ದು ಜೋಳದ ಇಳುವರಿಯೂ ಹೆಚ್ಚಿದೆ. ಎಕರೆಗೆ ಸುಮಾರು 8-10 ಕ್ವಿಂಟಲ್ ಇಳುವರಿ ಸಿಗುತ್ತದೆ ಎನ್ನುತ್ತಾರೆ ವಿಶ್ವಶಂಕರ್. ಈ ಭೂಪ್ರದೇಶದಲ್ಲಿ ಬೆಳೆದ ಜೋಳದ ಬೀಜಗಳಿಂದ ಬೇರೆ ಪ್ರದೇಶದಲ್ಲಿ ಬೆಳೆದರೆ ಈ ಮಟ್ಟಿನ ಇಳುವರಿಯಾಗಲಿ, ಗುಣಗಳಾಗಲಿ ಬರುವುದಿಲ್ಲ. ಹಾಗಾಗಿ ಎಲೇರಿ ಜೋಳಕ್ಕೆ ಭೌಗೋಳಿಕ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಇಲ್ಲಿನ ರೈತರು.
ಬೆಳೆ ಪರಿವರ್ತನೆ – ಬೀಜ ಬದಲಾವಣೆಯಿಂದ ಹೆಚ್ಚಿನ ಇಳುವರಿ
ಎಲೇರಿ ಗ್ರಾಮದ ರೈತರ ಮತ್ತೊಂದು ವಿಶೇಷತೆಯೆಂದರೆ ಪ್ರತಿವರ್ಷ ಬೆಳೆ ಪರಿವರ್ತನೆ ಮಾಡುತ್ತಾರೆ. ಈ ವರ್ಷ ಒಂದು ಹೊಲದಲ್ಲಿ ಜೋಳ ಬೆಳೆದರೆ ಮುಂದಿನ ವರ್ಷ ಆ ಜಮೀನಿನಲ್ಲಿ ಜೋಳ ಬೆಳೆಯದೆ ಶೇಂಗಾ, ತೊಗರಿ, ಸೂರ್ಯಕಾಂತಿ ಇತ್ಯಾದಿ ಬೆಳೆಯುತ್ತಾರೆ. ಅದೂ ಸಂಪೂರ್ಣ ಮಳೆಯಾಶ್ರಯದಲ್ಲಿ.
ಒಂದೇ ಹೊಲದಲ್ಲಿ ಅದೇ ಬೀಜಗಳನ್ನು ವರ್ಷದಿಂದ ವರ್ಷಕ್ಕೆ ಬೆಳೆದರೆ ಕಾಲಾನಂತರದಲ್ಲಿ ಇಳುವರಿ ಕುಸಿಯಬಹುದು ಮತ್ತು ರೋಗ, ಕೀಟಭಾದೆ ಹೆಚ್ಚಾಗುತ್ತದೆ. ಹಾಗಾಗಿ ಇಲ್ಲಿನ ರೈತರು ಪ್ರತಿ ಮೂರ್ನಾಲ್ಕು ವರ್ಷಗಳಿಗೊಮ್ಮೆ ತಮ್ಮ ಹೊಲದ ಜೋಳದ ಬೀಜಗಳನ್ನು ಒಬ್ಬರಿಗೊಬ್ಬರು ಬದಲಾವಣೆ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಹೆಚ್ಚಿನ ರೀತಿಯ ಕೀಟ ರೋಗಭಾದೆ ಇರುವುದಿಲ್ಲ. ಇಲ್ಲಿನ ಜನರು ಜೋಳವನ್ನು ಧರ್ಮದ ಬೆಳೆ ಎನ್ನುತ್ತಾರೆ. ಏಕೆಂದರೆ ಇದಕ್ಕೆ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತಿತರ ಔಷಧಗಳ ಬಳಕೆ ಮಾಡುವ ಅಗತ್ಯವಿಲ್ಲ. ಇದು ಸಂಪೂರ್ಣ ರಾಸಾಯನಿಕ ಮುಕ್ತವಾಗಿ ಬೆಳೆಯಬಹುದಾದ ಬೆಳೆ. ಅತಿವೃಷ್ಟಿ ಅನಾವೃಷ್ಟಿಗಳನ್ನು ಮೀರಿ ಬೆಳೆಯಬಲ್ಲ ಬೆಳೆ ಜೋಳ. ಬರ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಕಳೆದ ವರ್ಷ ಸತತವಾಗಿ 5 ತಿಂಗಳು ಮಳೆಯಾಗದಿದ್ದರೂ ಉತ್ತಮ ಇಳುವರಿ ದೊರೆತಿದೆ. ಕೇವಲ ಜೋಳವಷ್ಟೇ ಉಪಯೋಗಕ್ಕೆ ಸೀಮಿತವಲ್ಲ, ಹಸುಗಳಿಗೆ ಉತ್ತಮ ಮೇವು ಜೋಳದ ಕಡ್ಡಿಗಳು. ಯಾವುದೇ ರಾಸಾಯನಿಕ ಬಳಸದಿರುವ ಕಾರಣ ದೇಸಿ ಹಸುವಿನ ಉತ್ಪನ್ನ ಮಾರಾಟ ಮಾಡುವವರು ಎಲೇರಿ ಜೋಳದ ಹುಲ್ಲಿಗೆ ಬೇಡಿಕೆ ಇಡುತ್ತಿದ್ದಾರೆ ಎನ್ನುತ್ತಾರೆ ವಿಶ್ವಶಂಕರ್.
ರೊಟ್ಟಿ ಸೇರಿ ಹಲವು ಉತ್ಪನ್ನಗಳಿಗೆ ಬಳಕೆ
ಜೋಳದಲ್ಲಿ ಗ್ಲೂಟೆನ್ ಅಂಶ ಇಲ್ಲ. ಹಾಗಾಗಿ ಎಲ್ಲರೂ ತಿನ್ನಬಹುದಾದ ಧಾನ್ಯವಾಗಿದೆ. ಒಮೆಗಾ -3 ಫ್ಯಾಟಿ ಆಮ್ಲ, ಸುಣ್ಣ, ಪ್ರೊಟೀನ್ ಮತ್ತು ನಾರಿನಂಶವಿರುವ ಕಾರಣ ಆರೋಗ್ಯಕ್ಕೆ ಉತ್ತಮವಾಗಿದೆ. ಜೋಳ ಕೇವಲ ರೊಟ್ಟಿ ಮಾಡುವುದಕ್ಕೆ ಮಾತ್ರ ಸೀಮಿತವಾಗದೆ ಇತರೆ ಸಿರಿಧಾನ್ಯಗಳಂತೆ ಹಲವು ರೀತಿಯ ಅಡುಗೆ ಮಾಡಬಹುದಾಗಿದೆ. ಅಂಬಲಿ, ಜೋಳದ ಮುದ್ದೆ, ನುಚ್ತಿನಿಂದ ಮೊಸರು ಬಾನ, ಉಪ್ಪಿಟ್ಟು, ಹಸಿ ಜೋಳದ ಸೀತನಿ ಎಲ್ಲವೂ ಆರೋಗ್ಯಕ್ಕೆ ಪೂರಕವಾಗಿವೆ.
ಗ್ರಾಹಕರಿಗೆ ನೇರ ಮಾರಾಟ
ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣದ ಪ್ರಚಾರದಿಂದ ಸಾಕಷ್ಟು ಗ್ರಾಹಕರಿಗೆ ಎಲೇರಿ ಜೋಳದ ಕುರಿತು ಮಾಹಿತಿ ಲಭ್ಯವಾಗಿದೆ. ಇದರಿಂದ ಕೇವಲ ಯಾದಗಿರಿ ಅಷ್ಟೇ ಅಲ್ಲದೆ ದೇಶದ ನಾನಾಭಾಗಗಳಿಂದ ಗ್ರಾಹಕರು ಎಲೇರಿ ಜೋಳವನ್ನು ಖರೀದಿಸುವಂತಾಗಿದೆ. ವಿಶ್ವಶಂಕರ್ ಅವರು ಬೆಳೆದ ಸುಮಾರು 10 ಟನ್ ಜೋಳ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಇದರ ಹೊರತಾಗಿ ಇತರೆ ರೈತರು ಬೆಳೆದ ಸುಮಾರು 3 ಟನ್ ಜೋಳವನ್ನು ಸಹ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ವಿಶ್ವಶಂಕರ್. ಯಾವುದೇ ಮಧ್ಯವರ್ತಿ ಇಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ರೈತರಿಗೆ ನಾಲ್ಕು ಕಾಸು ಉಳಿದಂತಾಗಿದೆ. ಇನ್ನು ಎಲೇರಿ ಗ್ರಾಮದ ಈ ವಿಶಿಷ್ಟ ತಳಿಗೆ ಭೌಗೋಳಿಕ ಸ್ಥಾನಮಾನ ನೀಡಲೆಂದು ಕೃಷಿ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸಿದ್ದು ಅಲ್ಲಿನ ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಭೌಗೋಳಿಕ ಸ್ಥಾನಮಾನ ದೊರೆತರೆ ಎಲೇರಿ ಸುತ್ತಮುತ್ತದ ಗ್ರಾಮಗಳ ರೈತರಿಗೂ ಅನುಕೂಲವಾಗುತ್ತದೆ, ಮತ್ತಷ್ಟು ರೈತರು ಈ ಬೆಳೆ ಬೆಳೆಯಲು ಮುಂದಾಗುತ್ತಾರೆ. ಎಲೇರಿ ಬ್ರ್ಯಾಂಡ್ ಅಡಿಯಲ್ಲಿ ರೈತ ಉತ್ಪಾದಕರ ಸಂಸ್ಥೆಯನ್ನು ಸದ್ಯದಲ್ಲೇ ಪ್ರಾರಂಭಿಸಿ ಮಾರುಕಟ್ಟೆಯಲ್ಲಿ ಕಲಬೆರಕೆ ಜೋಳ ಮಾರಾಟ ತಡೆಯಬಹುದು ಎನ್ನುತ್ತಾರೆ ವಿಶ್ವಶಂಕರ್.
ಈಗಾಗಲೇ ಬೇರೆ ಬೇರೆ ಪ್ರಾಂತ್ಯದ ರೈತರು ಎಲೇರಿ ಜೋಳದ ಬೀಜಗಳನ್ನು ಪಡೆದು ಬೆಳೆಯಲು ಪ್ರಾರಂಭಿಸಿದ್ದಾರೆ. ಅವರ ಅನುಭವದ ಅನ್ವಯ ಎಲೇರಿಯಲ್ಲಿ ಬೆಳದಷ್ಟು ಗುಣಮಟ್ಟ ಬರದಿದ್ದರೂ ಈ ಹಿಂದೆ ಅವರು ಬೆಳೆಯುತ್ತಿದ್ದ ಜೋಳಕ್ಕಿಂತ ಉತ್ತಮ ಗುಣಮಟ್ಟ ದೊರೆಯುತ್ತಿದೆ ಎನ್ನುತ್ತಿದ್ದಾರೆ ಇದನ್ನು ಬೆಳೆದ ಕೃಷಿಕರು. ಇಂತಹ ಅಪರೂಪದ ವಿಶೇಷವಾದ ತಳಿಗೆ ಸೂಕ್ತ ಗೌರವ ಅದರಲ್ಲೂ ಭೌಗೋಳಿಕ ಸ್ಥಾನಮಾನ ದೊರೆಯಬೇಕಿದೆ. ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ವಿಶ್ವಶಂಕರ್ ಮತ್ತು ಇತರ ರೈತರಿಗೆ ಶುಭವಾಗಲಿ. ಹೆಚ್ಚು ಹೆಚ್ಚು ರೈತರು ಈ ತಳಿ ಬೆಳೆದು ಉತ್ತಮ ಆದಾಯಗಳಿಸಲಿ. ಗ್ರಾಹಕರು ನೇರವಾಗಿ ರೈತರಿಂದ ಖರೀದಿಸಿದರೆ ಇಬ್ಬರಿಗೂ ವಾಭವಾಗುತ್ತದೆ. ಮತ್ತೇಕೆ ತಡ? ನಿಮಗೂ ಈ ಮುತ್ತಿನಂತ ಎಲೇರಿ ಜೋಳ ಬೇಕಿದ್ದರೆ ವಿಶ್ವಶಂಕರ್ ಅವರನ್ನು ಸಂಪರ್ಕಿಸಿ +91 96209 69521. ಹಾಗೇ ಅವರಿಗೊಂದು ಅಭಿನಂದನೆ ತಿಳಿಸಿ.
