– ಡಾ. ಸತ್ಯನಾರಾಯಣ, ನಿವೃತ್ತ ಪ್ರಾಧ್ಯಾಪಕ
ಭಾರತ ಕಂಡ ಶ್ರೇಷ್ಠ ದಾರ್ಶನಿಕರಲ್ಲಿ ಶ್ರೀ ಯಾಜ್ಞವಲ್ಕ್ಯ ಮಹರ್ಷಿಗಳೂ ಒಬ್ಬರು. ಅವರ ಶೃತಿ ಮತ್ತು ಸ್ಮೃತಿಗಳನ್ನು ಕುರಿತಂತೆ ಸುಲಲಿತ ಸರಳ ಕನ್ನಡದಲ್ಲಿ ಆಕರ ಗ್ರಂಥಗಳ ಆಧಾರ ಸಹಿತ ಉದ್ಗ್ರಂಥವು ಪ್ರಕಟವಾದಂತಿಲ್ಲ. ಈ ದಿಶೆಯಲ್ಲಿ ಎಂ.ಸಿ. ಕೃಷ್ಣಮೂರ್ತಿ ಅವರ ಪ್ರಯತ್ನ ಶ್ಲಾಘನೀಯ. ಸರಿಸುಮಾರು 10 ವರ್ಷಗಳ ಕಾಲ ಸಂಶೋಧನೆ, ವಿದ್ವಾಂಸರೊಂದಿಗೆ ಅನೇಕ ಸುತ್ತಿನ ಚರ್ಚೆ, ಸಂವಹನ, ಅನೇಕ ಭಾಷೆಗಳಲ್ಲಿ ಆಕರ ಗ್ರಂಥಗಳ ಅಧ್ಯಯನದ ಫಲವಾಗಿ ‘ಭಾರತದ ಶ್ರೇಷ್ಠ ದಾರ್ಶನಿಕ ಯಾಜ್ಞವಲ್ಕ್ಯ ಮಹರ್ಷಿ’ ಪುಸ್ತಕವು ಮೂಡಿ ಬಂದಿದೆ.
ಶ್ರೀ ಯಾಜ್ಞವಲ್ಕರು ಅದ್ವೈತ ಸಿದ್ಧಾಂತದ ಆದ್ಯ ಪ್ರವರ್ತಕರು. ವೈದಿಕ ಯುಗಧರ್ಮ ಸುಧಾರಕರು. ಇವರು ಸಂಪಾದಿಸಿದ ಪ್ರಖ್ಯಾತ ಗ್ರಂಥಗಳಲ್ಲಿ
‘ಶುಕ್ಲ ಯಜುರ್ವೇದ ಸಂಹಿತೆ’, ‘ಶತಪಥ ಬ್ರಾಹ್ಮಣ’ ಮತ್ತು ಯರ್ಜುವೇದದ ಕಡೆಯ ಭಾಗ ‘ಈಶಾವಾಸ್ಯೋಪನಿಷತ್ತು’ ಮುಖ್ಯವಾದದ್ದು. ಇದು ಅಧ್ಯಾತ್ಮ ತತ್ತ್ವದ ಮಹಾದರ್ಶನವನ್ನು ಸುಲಭವಾಗಿ, ಸರಳವಾಗಿ ತಿಳಿಸುತ್ತದೆ. ಬೃಹದಾರಣ್ಯಕೋಪನಿಷತ್ತು ಶತಪಥ ಬ್ರಾಹ್ಮಣದ ಕಡೆಯ ಕಾಂಡ. ಈ ಭಾಗವು ಆತ್ಮಜ್ಞಾನ, ಮೋಕ್ಷ, ಸ್ವರೂಪ, ಮೋಕ್ಷ ಸಾಧನೆ, ಪ್ರಾಣದ ಶ್ರೇಷ್ಠತೆ, ಮುಂತಾದ ವಿಷಯಗಳನ್ನು ಒಳಗೊಂಡಿದೆ.
ಜೀವನಕ್ಕೆ ಮೆರಗು ನೀಡಲು ಅಗತ್ಯವಾದ ಅನೇಕ ಅಂಶಗಳನ್ನು ದಾರ್ಶನಿಕರ ಈ ಚರಿತ್ರೆಯು ನಮ್ಮ ಮುಂದೆ ಅನಾವರಣ ಮಾಡುತ್ತದೆ. ಈ ಪುಸ್ತಕ ಪುರಾಣ ಕಥೆಯಲ್ಲ. ವ್ಯಕ್ತಿಗೆ ಗುರಿ, ಜ್ಞಾನವೃದ್ಧಿಗೆ ಉಪಾಯ ಸೇರಿದಂತೆ ಹಲವು ವಿಷಯಗಳನ್ನು ಸರಳವಾಗಿ, ಸುಂದರವಾಗಿ, ನವಿರಾದ ಹೊಸ ಕನ್ನಡದಲ್ಲಿ ಓದುಗರಿಗಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕವು ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಕುತೂಹಲವನ್ನು ಕೆರಳಿಸುತ್ತದೆ. ಜ್ಞಾನದ ಬೆಳಕನ್ನು ಪಸರಿಸುತ್ತದೆ. ಸಂಶೋಧನೆಯ ಆಧಾರದ ಮೇಲೆ ಹೆಣೆದಿದ್ದರೂ ಕುತೂಹಲಕಾರಿ ಓದನ್ನು ಬಿಟ್ಟುಕೊಡುವುದಿಲ್ಲ.
ಯಾಜ್ಞವಲ್ಕ್ಯರನ್ನು ಪರಿಚಯಿಸುವ ಈ ಗ್ರಂಥವು, 29 ಅಧ್ಯಾಯಗಳಲ್ಲಿ ವಿಂಗಡನೆಯಾಗಿದೆ. ಮೊದಲ ಮೂರು ಅಧ್ಯಾಯಗಳಲ್ಲಿ ಶ್ರೀ ಯಾಜ್ಞವಲ್ಕ್ಯರ ಜನನ ಮತ್ತು ಬಾಲ್ಯದ ಕುರಿತಂತೆ ಸಂಶೋಧಿಸಿದ ಅಂಶಗಳನ್ನು ಆಧಾರ ಸಹಿತ ನಿರೂಪಿಸಲಾಗಿದೆ. ಕಾಲ ನಿರ್ಣಯದ ಬಗ್ಗೆ ಸ್ಪಷ್ಟತೆ ಇಲ್ಲವಾದರೂ ಸಾವಿರಾರು ವರ್ಷಗಳ ಹಿಂದಿನವರು ಎಂಬ ಮಾಹಿತಿಯುಕ್ತ ವಿಷಯಗಳು ಈ ಪುಸ್ತಕದಲ್ಲಿ ಉಲ್ಲೇಖವಾಗಿವೆ. ಜೈಮಿನಿ ಋಷಿ, ವೈಶಂಪಾಯನ ಋಷಿ, ಬಾಷ್ಕಲ ಋಷಿ ಮುಂತಾದ ವಿದ್ಯಾಗುರುಗಳಿಂದ ಸಾಮವೇದ, ಅಥರ್ವಣ ವೇದ, ಋಗ್ವೇದ ಮತ್ತು ಯಜುರ್ವೇದ ಪಾಠವನ್ನು ಪಡೆದು ಚತುರ್ವೇದ ಪಾರಂಗತನಾಗುವ ಪರಿ ಓದುಗರಿಗೆ ಖುಷಿ ನೀಡುತ್ತದೆ.
ನಾಲ್ಕನೆಯ ಅಧ್ಯಾಯವು ವೈಶಂಪಾಯನರೊಂದಿಗಿನ ವಿವಾದವನ್ನು ಒಳಗೊಂಡಿದೆ. ಯಜುರ್ವೇದದ ‘ವಮನ’ ಘಟನೆಗಳು ಸ್ವಾರಸ್ಯಕರವಾಗಿ ಬಿಂಬಿತವಾಗಿದೆ. ಐದನೇ ಅಧ್ಯಾಯದಲ್ಲಿ ಗಾಯತ್ರಿದೇವಿ ಉಪಾಸನೆ ಮತ್ತು ಸೂರ್ಯನಿಂದ ‘ಶುಕ್ಲ ಯಜುರ್ವೇದ’ದ ಉಪದೇಶ ಪಡೆದ ಬಗ್ಗೆ ಪ್ರಸ್ತಾಪಿಸಲಾಗಿದೆ. ಹೀಗೆ ಮುಂದುವರಿದು ವಿಶ್ವಾವಸು ಜನಕರೊಂದಿಗೆ ಸಂವಾದ ಮುಂದುವರಿಯುತ್ತದೆ. ಕಾತ್ಯಾಯನಿ ದೇವಿಯೊಂದಿಗೆ ವಿವಾಹ, ದಿಗ್ವಿಜಯ, ಶತಪಥ, ಬ್ರಾಹ್ಮಣ ಮತ್ತು ಬೃಹದಾರಣ್ಯಕೋಪನಿಷತ್ತುಗಳ ವಿವರಣೆ, ಅನುಭವ ಮಂಟಪ, ಯಾಜ್ಞವಲ್ಕ್ಯರ ಪ್ರವಚನ, ಸ್ಮೃತಿ ಬಗೆ ಟಿಪ್ಪಣಿ, ಕಾಣ್ವ ಶಾಖಾ ಪ್ರವರ್ತನ ಹೀಗೆ ಮುಂದುವರಿದು ಪರಿವ್ರಾಜ್ಯ ಸನ್ಯಾಸತ್ವವನ್ನು ಸ್ವೀಕರಿಸಿ ನೆಲೆ ನಿಂತು ಕಾಲಾಂತರದಲ್ಲಿ ಬ್ರಹ್ಮೈಕ್ಯರಾಗುವ ತನಕ ಹಲವು ಉತ್ತಮ ವಿಚಾರಗಳನ್ನು ಪುಸ್ತಕ ತೆರೆದಿಡುತ್ತದೆ. ಒಂದು ಉತ್ತಮ ಓದು ಮತ್ತು ಜ್ಞಾನವೃದ್ಧಿಗಾಗಿ ದಾರಿ ಎಂಬುದರಲ್ಲಿ ಸಂಶಯವಿಲ್ಲ.
ಕೃ: ಭಾರತದ ಶ್ರೇಷ್ಠ ದಾರ್ಶನಿಕ ಯಾಜ್ಞವಲ್ಕ್ಯ ಮಹರ್ಷಿ
ಲೇ: ಎಂ.ಸಿ. ಕೃಷ್ಣಮೂರ್ತಿ
ಪ್ರ: ಯಾಜ್ಞವಲ್ಕ್ಯ ಗ್ರಂಥ ಪ್ರತಿಷ್ಠಾನ, ಬೆಂಗಳೂರು
ಪು: 352
ಬೆ: 200 ರೂ ಸಂ: 9945648392
