- ಕೃಷ್ಣಮೂರ್ತಿ ಆರ್., ಕಾರ್ಯದರ್ಶಿ, ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ
ಒಂದು ವಸ್ತು, ಉಪಕರಣ, ತತ್ತ್ವ, ಸಿದ್ಧಾಂತ ಇತ್ಯಾದಿಗಳು ಮನುಷ್ಯನ ಜೀವನದಲ್ಲಿ ಬದಲಾವಣೆ ಮತ್ತು ಉನ್ನತಿಗೆ ಅವಶ್ಯಕತೆಯಾಗಿ ಬಂದು ಒದಗಬಹುದು. ಈ ಅವಶ್ಯಕತೆಯು ಬಹುಕಾಲ ಅಂದರೆ ಪೀಳಿಗೆಯಿಂದ ಪೀಳಿಗೆಗಳಿಗೂ ತನ್ನ ಉಪಯುಕ್ತತೆಯನ್ನು ಕಾಯ್ದುಕೊಂಡು ಬರುತ್ತದೆ ಎಂದರೆ ಮಾನವನಿಗೆ ಅದರ ಅವಶ್ಯಕತೆ ಇದೆ ಎಂದು ಗ್ರಹಿಸಬಹುದು. ಇಂತಹ ಅವಶ್ಯಕತೆಗಳನ್ನು ಪೂರೈಸುವ ಸಾಧನಗಳನ್ನು ಮಾನವ ತನ್ನ ಜೀವನದ ಉದ್ದಕ್ಕೂ ಹುಡುಕುತ್ತಲೇ ಇರುತ್ತಾನೆ. ಇದು ನಿರಂತರ ಹುಡುಕಾಟ, ಹೋರಾಟ ಕೂಡ. ಅದರಲ್ಲೂ ಪ್ರಾಚೀನ ಕಾಲದಿಂದಲೂ ವಿಶೇಷವಾಗಿ ಹಿಂದೂ ಸಮಾಜವು ಇಂತಹ ಅವಶ್ಯಕತೆಗಳಿಗೆ ಹುಡುಕಾಟ ಮತ್ತು ಉತ್ತರ ಕಂಡುಕೊಳ್ಳುವಲ್ಲಿ ಜಗತ್ತಿನ ಎಲ್ಲಾ ನಾಗರಿಕತೆಗಳಿಗಿಂತ ಮುಂದಿದೆ. ಹಿಂದೂ ಸಮಾಜದ ಈ ಪ್ರವೃತ್ತಿಯು ಕಾಲಕ್ಕೆ ತಕ್ಕಂತೆ ತನ್ನ ಆಚಾರ ಮತ್ತು ವಿಚಾರಗಳಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳುತ್ತಾ ಆಯಾಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾ ಬಂದಿದೆ. ಇದು ಹಿಂದೂ ಸಮಾಜವನ್ನು ನಿಂತ ನೀರಾಗಿಸದೆ, ನಿರಂತರ ಬದಲಾವಣೆಗೆ ಹೊಂದಿಕೊಳ್ಳುವ ಹರಿಯುವ ಜೀವನದಿಯನ್ನಾಗಿ ಮಾಡಿದೆ. ಇಂತಹ ಬದಲಾವಣೆಗಳು ಜಗತ್ತಿನ ಇತರೆ ಮತಗಳು ಮತ್ತು ಸಂಸ್ಕೃತಿಗಳಲ್ಲಿ ಕಾಣಬರುವುದಿಲ್ಲ. ಆದ್ದರಿಂದ ಅವುಗಳಲ್ಲಿ ಹೆಚ್ಚಿನ ನಾಗರಿಕತೆಗಳು ನಶಿಸಿಹೋಗಿವೆ. ಇಸ್ಲಾಂ, ಕ್ರೈಸ್ತ, ಯಹೂದಿ ಮತಗಳು ತಮ್ಮ ವಿಚಾರಗಳಲ್ಲಿ ಬದಲಾವಣೆ ಕಂಡುಕೊಳ್ಳದೇ ಇರುವುದರಿಂದ ಸಂಕುಚಿತವಾಗಿ ಉಳಿದಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ತನ್ನ ಸಮಸ್ಯೆಗಳಿಗೆ ಬೇಕಾದ ಪರಿಹಾರಗಳನ್ನು ಹಿಂದೂ ಸಮಾಜವು ತನ್ನ ಸನಾತನ ನಿತ್ಯನೂತನ ತತ್ತ್ವಗಳ ಮೂಲಕ ಕಂಡುಕೊಂಡಿದೆ. ಇದಕ್ಕಾಗಿ ಅಸಂಖ್ಯ ತತ್ತ್ವಜ್ಞಾನಿಗಳು, ಸಾಧಕರು, ಋಷಿಗಳು, ಮುನಿಗಳು ತಮ್ಮ ಜೀವನವನ್ನು ಮುಡಿಪಾಗಿ ಇಟ್ಟು ಸಮಾಜವನ್ನು ವಿಶ್ವಮಾನವತ್ವದ ಕಡೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದಲೇ ಅವರ ತತ್ತ್ವಗಳು, ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ. ಇಂತಹ ಮಹಾನ್ ಪುರುಷರ ಸಾಲಿನಲ್ಲಿ ಡಾಕ್ಟರ್ ಕೇಶವ ಬಲಿರಾಮ್ ಹೆಡಗೆವಾರ್ ಅವರೂ ಒಬ್ಬರು. ನೂರಾರು ವರ್ಷಗಳಿಗೊಮ್ಮೆ ಕಾಣಸಿಗುವ ಅಂತಹ ಮಹಾನ್ ವ್ಯಕ್ತಿಗಳನ್ನು ಯುಗಪುರುಷ ಎಂದು ಹಿಂದೂ ಸಮಾಜ ಗುರುತಿಸುತ್ತದೆ.
ಡಾಕ್ಟರ್ ಜೀ ಪ್ರಸ್ತುತತೆ
ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ 100 ಸಂವತ್ಸರಗಳನ್ನು ದಾಟುತ್ತಿದೆ. ಹೆಡಗೆವಾರ್ ಅವರು ಸಂಘವನ್ನು ಸ್ಥಾಪಿಸಿದಾಗ ಈ ಸಂಘಟನೆಯು 100 ಸಂವತ್ಸರಗಳನ್ನು ಪೂರೈಸುತ್ತದೆ ಎಂದು ಭಾವಿಸಿರಲಿಲ್ಲ ಮತ್ತು ಅಪೇಕ್ಷೆಯೂ ಇರಲಿಲ್ಲ. ಆದಷ್ಟು ಬೇಗ ಈ ಸಂಘಟನೆಯು ತನ್ನ ಗುರಿಯನ್ನು ಸಾಧಿಸಿ ಹಿಂದೂ ಸಮಾಜವು ಸಂಘವಾಗಿ, ಸಂಘವು ಹಿಂದೂ ಸಮಾಜದಲ್ಲಿ ಲೀನವಾಗಬೇಕು ಎಂದು ನಿರ್ಧರಿಸಿದ್ದರು. ಆದರೆ, ಸಮಾಜದ ವೈರುಧ್ಯತೆಗಳು ಹಾಗೂ ಸಂಕೀರ್ಣತೆಗಳು ಹೆಚ್ಚಾಗುತ್ತಾ ಗುರಿಯನ್ನು ತಲುಪಲು ಕಾಲವೂ ಹೆಚ್ಚಾಗತೊಡಗಿತು. ಹೆಡಗೆವಾರರ ಚಿಂತನೆಗಳ ಪ್ರಸ್ತುತತೆ ನಿತ್ಯವಾಗಿರುವುದರಿಂದ ಗುರಿಯ ದಾರಿ ಬದಲಾಗದೆ, ಗುರಿಯನ್ನು ತಲುಪುವ ಧೃಡವಿಶ್ವಾಸ ಕಾರ್ಯಕರ್ತರಲ್ಲಿ ಸ್ಪಷ್ಟವಾಗಿದೆ. 100 ವರ್ಷ ಕಳೆದರೂ ಡಾಕ್ಟರ್ ಜೀ ಅವರ ವಿಚಾರ ಚಿಂತನೆಯು ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಇದರಲ್ಲಿ ಪ್ರಮುಖವಾದ ಕೊಡುಗೆ ಡಾಕ್ಟರ್ ಜೀ ಅವರ ಚಿಂತನೆಯನ್ನು ಮನನ ಮಾಡಿ ನಿರಂತರತೆಯ ಮೂಲಕ ಸಂಘಟನೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ನಂತರದ ಸರಸಂಘಚಾಲಕರನ್ನು ಒಳಗೊಂಡ ಎಲ್ಲಾ ಕಾರ್ಯಕರ್ತರದ್ದು. ಮನಸ್ಸುಗಳನ್ನು ಬೆಸೆಯುವ ಮೂಲಕ ಸಂಘಟನೆಯ ಕಾರ್ಯಮಾಡುವ ಪದ್ಧತಿಯನ್ನು ಕಾರ್ಯಕರ್ತರು ಮನಗಂಡು ಅದನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿರುವುದು ಇಂದಿಗೂ ನಾವು ಕಾಣುವ ಜ್ವಲಂತ ಉದಾಹರಣೆ.
ʼಸ್ವʼತ್ವ ಜಾಗೃತಿ
ಡಾಕ್ಟರ್ ಜೀ ಅವರ ಚಿಂತನೆಯಲ್ಲಿ ಸಂಘಟನೆಯ ಬುನಾದಿ ಹಿಂದುತ್ವ. ಇದು ಯಾವುದೇ ಒಂದು ಪುಸ್ತಕ ಅಥವಾ ಗ್ರಂಥಾಧಾರಿತವಾದ ಒಂದು ರಿಲಿಜಿಯನ್ ಅಲ್ಲ. ಈ ಸನಾತನ ಧರ್ಮವು ಹೆಸರೇ ಹೇಳುವಂತೆ ನಿತ್ಯ ಸತ್ಯದ ಆಧಾರದ ಮೇಲೆ ನಿಂತಿದೆ. ಇತರೆ ರಿಲಿಜಿಯನ್ ತರಹ ಕುರಾನ್, ಬೈಬಲ್, ದಶಾಜ್ಞೆಗಳು ಇತ್ಯಾದಿಗಳಂತೆ ಅಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾವುದೇ ಒಂದು ಪುಸ್ತಕ ಅಥವಾ ಲಿಖಿತ ನಿಯಮಾವಳಿಯ ಆಧಾರದ ಮೇಲೆ ಬೆಳೆದಿಲ್ಲ. ಇಂತಹ ಬದಲಾವಣೆಗಳನ್ನು ಇತ್ತೀಚಿನ ದಿನಗಳಲ್ಲಿ ಸಮರ್ಥವಾಗಿ ಒಪ್ಪಿಕೊಂಡ ಕೆಲವು ಅಂಶಗಳನ್ನು ಗಮನಿಸೋಣ.
ಈ ಚಿಂತನೆಗಳು ಪ್ರಯೋಗಶಾಲೆಯಲ್ಲಿ ಪ್ರಾಯೋಗಿಕವಾಗಿ ಉಪಯೋಗಿಸಲ್ಪಟ್ಟು ನಂತರ ಸಮಾಜದಲ್ಲಿ ಬಳಕೆಯಾಗುವಂತಹವುಗಳಲ್ಲ. ನಿತ್ಯ ಸತ್ಯವಾದ ಚಿಂತನೆಗಳು ಕಾಲಪ್ರವಾಹದಲ್ಲಿ ಎಲ್ಲ ಪರೀಕ್ಷೆಗಳನ್ನು ದಾಟಿ ಬಂದಂತವು. ಆದ್ದರಿಂದ ಸಂಘಟನೆಯ ಕಾರ್ಯದಲ್ಲಿ ಇವುಗಳನ್ನು ಪರೀಕ್ಷಿಸಿ ಬಳಸಬೇಕಾದ ಅಗತ್ಯವಿಲ್ಲ. ಇವುಗಳ ಉಪಯೋಗಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಪ್ರಯೋಜನ ಪಡೆದುಕೊಳ್ಳುವ ಬುದ್ಧಿ ಮತ್ತು ಕ್ಷಮತೆ ಇರಬೇಕು. ಸಂಘದ ಕಾರ್ಯಕರ್ತರು ಈ ಕೆಲಸದಲ್ಲಿ ಸಫಲರಾಗಿರುವುದೇ ಇದರ ಯಶಸ್ಸಿನ ಸಂಕೇತ.
80ರ ದಶಕದಲ್ಲಿ ಭಾರತದಲ್ಲಿ ಕಂಪ್ಯೂಟರ್ ಯುಗ ಆರಂಭವಾಯಿತು. ಕಂಪ್ಯೂಟರ್ ಭಾರತದಲ್ಲಿ ಅವಿಷ್ಕಾರಗೊಂಡಿದ್ದಲ್ಲ. ಪ್ರತಿಯೊಂದಕ್ಕೂ ಅಮೆರಿಕ ಅಥವಾ ಪಾಶ್ಚಿಮಾತ್ಯ ದೇಶಗಳನ್ನು ಅವಲಂಬಿಸಿತ್ತು. ಅಂತಹುದರಲ್ಲಿ ಇಡೀ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಂಪ್ಯೂಟರ್ ಕಾಲಿಟ್ಟಿತು. ಬರೀ ಹಾಳೆಯಲ್ಲಿ ಲೆಕ್ಕದ ಮೂಲಕ ಕೆಲಸ ಮಾಡುತ್ತಿದ್ದ ಅಂದಿನ ಪೀಳಿಗೆಗೆ ಕಂಪ್ಯೂಟರ್ ಕಲಿಕೆ – ಬಳಕೆ ಅತ್ಯವಶ್ಯವಾಯಿತು. ಅಳಿವು ಉಳಿವಿನ ಪ್ರಶ್ನೆ. ಆದರೆ ಸಮಾಜ ಸವಾಲನ್ನು ಸಮರ್ಥವಾಗಿ ಸ್ವೀಕರಿಸಿತು, ಯಶಸ್ವಿಯೂ ಆಯಿತು. ನಂತರ ಜೀವನದ ಎಲ್ಲಾ ಕ್ಷೇತ್ರಗಳಿಗೂ ಕಂಪ್ಯೂಟರ್ ಕಾಲಿಟ್ಟಿತು. ನಂತರದ್ದು ಇಂಟರ್ನೆಟ್ ಯುಗ. 2ಜಿ, 3ಜಿ, 4ಜಿ, 5ಜಿ ಎಲ್ಲದರ ಮೂಲಕ ಭಾರತ ತನ್ನದಲ್ಲದಿದ್ದ ಕ್ಷೇತ್ರದಲ್ಲಿ ಸಫಲವೂ ಆಯಿತು.
ಮೊಬೈಲ್ ಸಮಾಜದಲ್ಲಿ ಯಾವ ಪ್ರಮಾಣದಲ್ಲಿ ಒಳ್ಳೆಯದಕ್ಕೆ ಮತ್ತು ಅನವಶ್ಯಕ ಬಳಕೆಯಾಗುತ್ತಿದೆಯೆಂದು ಎಲ್ಲರಿಗೂ ತಿಳಿದಿದೆ. ಆದರೆ ಸಂಘಕಾರ್ಯದಲ್ಲಿ ಆಧುನಿಕ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಗಳು ಹಿಂದುತ್ವದ ಸಿದ್ಧಾಂತಗಳನ್ನು ಮೂಲೆಗುಂಪು ಮಾಡದೇ ಅದಕ್ಕೆ ಪೂರಕವಾಗಿಯೇ ಸಂಘಕಾರ್ಯದ ವೇಗವನ್ನು ಹೆಚ್ಚಿಸಲು ಬಳಕೆಯಾಗುತ್ತಿವೆ. ಇದು ಡಾಕ್ಟರ್ ಜೀ ಅವರ ಸಂಘಟನಾತ್ಮಕ ಚಿಂತನೆಗಳು ಎಷ್ಟು ಬಲವಾಗಿವೆ ಎಂದು ತೋರಿಸುತ್ತವೆ.
ಇನ್ನು ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ಮೂಲಕ ಬದಲಾವಣೆಗೆ ಹಾತೊರೆಯುತ್ತಿರುವ ಜೆನ್ ಜೀ ಪೀಳಿಗೆಯೂ ಒಂದು ಸವಾಲು. ಅತ್ಯಾಧುನಿಕ ತಲೆಮಾರಿನ ಈ ಯುವ ಪೀಳಿಗೆಯ ಸಮುದಾಯವು ಸಮಾಜದಲ್ಲಿ ಸ್ವಾಸ್ಥ್ಯವನ್ನು ಕೆಡಿಸುವ ಕಾಣದ ಕೈಗಳ ಗೊಂಬೆಗಳಾಗದೆ ತಮ್ಮತನವನ್ನು ಉಳಿಸಿಕೊಂಡು ಸತ್ಯಾನ್ವೇಷಣೆಯ ಮೂಲಕ ಬದಲಾವಣೆಯ ಭಾಗವಾಗಬೇಕೆಂಬುದು ರಾ.ಸ್ವ.ಸಂಘದ ಅಪೇಕ್ಷೆ. ಈ ಸವಾಲಿಗೆ ಇತ್ತೀಚಿನ ಕಾರ್ಯಕ್ರಮದಲ್ಲಿ ಉತ್ತರಿಸುತ್ತಾ ಸರಸಂಘಚಾಲಕರು “ಸಂವಿಧಾನದ ಚೌಕಟ್ಟಿನಲ್ಲಿ ಜೆನ್-ಜೀಗಳೂ ಸಂಘಟನೆಯ ಕಾರ್ಯದಲ್ಲಿ ಭಾಗಿಯಾಗಬಹುದೆಂದು ಹೇಳಿದ್ದಾರೆ”. ಕಾಲದ ಏಳು ಬೀಳುಗಳ ಮಧ್ಯೆಯೂ ಗುರಿಯ ಕಡೆ ದಾಪುಗಾಲು ಹಾಕುವ ಸಂಘದ ಪ್ರವೃತ್ತಿಯನ್ನು ಇದು ತೋರಿಸುತ್ತದೆ.
ಡಾಕ್ಟರ್ ಜೀ ಅವರ ಇನ್ನೊಂದು ಮಾತು ಶಕ್ತಿಯ ಬಗ್ಗೆ. “ಜಗತ್ತಿನಲ್ಲಿ ಸಂಘಟನೆಯಿಂದಲೇ ಶಕ್ತಿ, ಅದರ ಬಲದ ಮೇಲೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು. ಇದು ನನ್ನ ಧೃಡವಾದ ನಂಬಿಕೆ”. ಈ ಮಾತನ್ನು ಡಾಕ್ಟರ್ ಜೀ ಅವರು 70-80 ವರ್ಷಗಳ ಹಿಂದೆ ಹೇಳಿದ್ದಾದರೂ ಇದು ಸಾರ್ವಕಾಲಿಕ ಸತ್ಯ ಎಂಬುದನ್ನು ಮಹಾಭಾರತದ ಒಂದು ದೃಷ್ಟಾಂತದಿಂದ ತಿಳಿಯೋಣ. ಯುದ್ಧವೆಲ್ಲಾ ಮುಗಿದು ಧರ್ಮರಾಯ ಸಿಂಹಾಸನವನ್ನು ಏರುವಾಗ ಕೃಷ್ಣನನ್ನು ಕೇಳುತ್ತಾನೆ. “ಕೃಷ್ಣ ಈ ವೈಭೋಗದ ಸಿಂಹಾಸನವನ್ನು ಏರುವುದಕ್ಕೆ ನಾವು ಸಹಸ್ರಾರು ಜನರ ಸಾವು ನೋವುಗಳನ್ನು ನೋಡಬೇಕಾಯಿತು. ಶಾಂತಿಗಾಗಿ ಏಕೆ ಈ ಹಿಂಸೆ?”. ಆಗ ಕೃಷ್ಣ ಪಾಂಡವರನ್ನೆಲ್ಲಾ ಶರಶೈಯ್ಯೆಯಲ್ಲಿದ್ದ ಭೀಷ್ಮನ ಬಳಿಗೆ ಕರೆದೊಯ್ದು ಉಪದೇಶ ಮಾಡಿಸುತ್ತಾನೆ. ಭೀಷ್ಮನು ಶಾಂತಿಯ ವಿಚಾರವಾಗಿ ಉಪದೇಶ ಮಾಡುತ್ತಾ “ಶಾಂತಿ ಸ್ಥಾಪನೆಗಾಗಿ ಯುದ್ಧ ಅವಶ್ಯಕ. ಸಾವು-ನೋವು ಅದರ ಭಾಗ. ಆದ್ದರಿಂದ ಶಾಂತಿ ಸ್ಥಾಪನೆಗೆ ಶಕ್ತಿಯು ಅತ್ಯವಶ್ಯಕ. ಮಹಾಭಾರತದ ಯುದ್ಧದಿಂದಾಗಿಯೇ ನಿನಗೆ ಇಂದು ಶಾಂತಿ ಸ್ಥಾಪಿಸುವ ಅವಕಾಶ ಲಭಿಸಿದೆ. ಆದ್ದರಿಂದ ದೊರೆತ ಅವಕಾಶವನ್ನು ಮತ್ತು ಶಕ್ತಿಯನ್ನು ಕಡೆಗಣಿಸಬಾರದು”.


ಸ್ವತಂತ್ರ ಭಾರತದಲ್ಲಿ ಜವಹರಲಾಲ್ ನೆಹರೂ ಅವರ ಕೇಂದ್ರ ಸರ್ಕಾರದ ಸಂಪುಟದಲ್ಲಿ ವಿ. ಕೃಷ್ಣಮೆನನ್ ಅವರು ರಕ್ಷಣಾ ಮಂತ್ರಿಯಾಗಿದ್ದರು. ಶಾಂತಿಯ ಗುಂಗಿನಲ್ಲಿ ಇದ್ದ ನೆಹರೂ ಅವರ ಸಂಪುಟ ಸಚಿವರು ರಕ್ಷಣಾ ವಿಭಾಗಕ್ಕೆ ಇಷ್ಟೊಂದು ಹಣ ತೆಗೆದಿಡುವುದು ವ್ಯರ್ಥ. ಯುದ್ಧವೇ ಇಲ್ಲದಿರುವಾಗ ರಕ್ಷಣ ವ್ಯವಸ್ಥೆಗೆ ಇಷ್ಟೊಂಡು ಹಣ ಖರ್ಚುಮಾಡುವ ಅಗತ್ಯವಿಲ್ಲ ಎಂದು ನಿರ್ಧರಿಸಿದರು. ಬೇಸತ್ತ ಜನರಲ್ ಕೆ.ಎಸ್ ತಿಮ್ಮಯ್ಯ ರಾಜಿನಾಮೆ ನೀಡಿದರು. ಮೆನನ್ ಅವರ ಈ ತರಹದ ಹಲವು ನಿರ್ಣಯಗಳಿಂದ ಭಾರತೀಯ ಸೇನೆಗೆ ಯುದ್ಧ ಸಿದ್ಧತೆಯ ಅವಕಾಶವೇ ಇರಲಿಲ್ಲ. 1962ರಲ್ಲಿ ಚೀನಾ ಆಕ್ರಮಣವನ್ನು ಮಾಡಿ ಭೂಭಾಗವನ್ನು ಕಬಳಿಸಿತು. ನೆಹರೂ ಅಸಹಾಯಕರಾಗಿ ಸೋಲೊಪ್ಪಿಕೊಂಡರು. ಪ್ರಸ್ತುತ ಜಗತ್ತಿನ ವಿದ್ಯಮಾನಗಳನ್ನು ನೋಡಿದರೆ, ಜಗತ್ತಿನ ಎಲ್ಲೆಡೆ ಯುದ್ಧಭೀತಿ ಮತ್ತು ಅಶಾಂತಿ. ಭಾರತದಲ್ಲಿ ಎಂದಿನಂತೆ ಜನರು ತಮ್ಮ ವ್ಯಾಪಾರ, ಕೃಷಿ, ಮನೋರಂಜನೆ, ದಿನನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಭಾರತದಲ್ಲಿ ಜನರು ಶಾಂತಿಯಿಂದ ಬದುಕುತ್ತಿದ್ದಾರೆ. ಇದಕ್ಕೆ ಭಾರತೀಯ ಸನಾತನ ಧರ್ಮದ ‘ಕೃಣ್ವಂತೋ ವಿಶ್ವಮಾರ್ಯಂ’ ಚಿಂತನೆಯ ಜೊತೆಗೆ ಗಳಿಸಿರುವ ಅಗಾಧ ಶಕ್ತಿ ಹಿಂದೆ ಇದೆ. ಇಂದು ಭಾರತ ಜಗತ್ತಿನಲ್ಲಿ ಪರಮಾಣು ಶಕ್ತಿಯ ದೇಶವಾಗಿ ಹೊರಹೊಮ್ಮಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಹೊಸ ಹೊಸ ಆವಿಷ್ಕಾರ, ಸ್ವದೇಶೀ ನಿರ್ಮಿತ ದೂರಗಾಮಿ ಕ್ಷಿಪಣಿಗಳು, ಡ್ರೋನ್ಗಳು, ಯುದ್ಧ ನೌಕೆ, ಮದ್ದುಗುಂಡುಗಳ ಕಾರ್ಖಾನೆಗಳು, ಹೊರದೇಶಗಳಿಂದ ಕೊಂಡುಕೊಂಡ ರಾಫೆಲ್ ಯುದ್ಧವಿಮಾನಗಳು, ಎಸ್-400 ಕ್ಷಿಪಣಿಗಳು, ಆಧುನಿಕ ತಂತ್ರಜ್ಞಾನ, ಇವೆಲ್ಲಕ್ಕೂ ಬೇಕಾದ ಬೃಹತ್ ಬಜೆಟ್… ಇವೆಲ್ಲವೂ ಭಾರತವನ್ನು ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ. ಇಂತಹ ಶೀಲಯುಕ್ತ ಶಕ್ತಿಯಿಂದ ಭಾರತದಲ್ಲಿ ಶಾಂತಿ ಸಾಧ್ಯವಾಗಿದೆ. ಇಂತಿರುವಾಗ ಹಿಂದೂ ಸಮಾಜವು ತನ್ನ ಏಳಿಗೆಯನ್ನು ತನ್ನ ಶಕ್ತಿಯಿಂದಲೇ ಕಂಡುಕೊಳ್ಳಬೇಕು ಎನ್ನುವ ಡಾಕ್ಟರ್ ಜೀ ಅವರ ಚಿಂತನೆ ಇಂದಿಗೂ ಪ್ರಸ್ತುತ, ಹಾಗೆ ಮುಂದೆಯೂ ಕೂಡ.
ಡಾಕ್ಟರ್ ಜೀ ಅವರ ಚಿಂತನೆಯಲ್ಲಿ ಹಿಂದೂ ಸಮಾಜ ತನ್ನ ಎಲ್ಲಾ ಅಂಗಗಳಲ್ಲೂ ಸ್ವದೇಶೀ ಆಗಬೇಕು. ಡಾಕ್ಟರ್ ಜೀ ಅವರ ಸ್ವದೇಶೀ ಚಿಂತನೆ ಎಂದರೆ ನಾವು ಉಪಯೋಗಿಸುವ ವಸ್ತುಗಳು, ನಾವು ಅಳವಡಿಕೊಳ್ಳುವ ತಂತ್ರಜ್ಞಾನ ನಮ್ಮ ದೇಶದ್ದೇ ಆಗಿರಬೇಕು, ನಮಗೆ ಬೇಕಾಗುವ ಉಪಕರಣಗಳು ಇತ್ಯಾದಿ ಇಲ್ಲಿನವೇ ಆಗಿರಬೇಕು ಎಂಬಷ್ಟೇ ಅರ್ಥದಲ್ಲಿ ಮಾತ್ರ ಅಲ್ಲ ಎಂಬುದು ಗಮನೀಯ. ಸ್ವದೇಶೀ ಎಂಬುದು ಒಂದು ಅವಸ್ಥೆ. ಭಾರತೀಯ ಸಂಸ್ಕೃತಿಯಲ್ಲಿ ಆತ್ಮನ ಸಾಕ್ಷಾತ್ಕಾರವು ಅತ್ಯಂತ ಪ್ರಮುಖವಾದ ಘಟ್ಟ. ಉಪನಿಷತ್ತುಗಳು ‘ಆತ್ಮಾನಂ ವಿದ್ದಿ’ ಅಂದರೆ ನಿನ್ನ ಮೂಲ ಸ್ವರೂಪವನ್ನು ಅರಿ (know yourself) ಎಂದು ಹೇಳುತ್ತವೆ. ಭೌತಿಕ ವ್ಯಾಖ್ಯಾನದಲ್ಲಿ ದೇಹ, ಇಂದ್ರಿಯ ಮತ್ತು ಮನಸ್ಸು. ಆಧ್ಯಾತ್ಮದ ದೃಷ್ಟಿಕೋನದಲ್ಲಿ ‘ಸ್ವ’ ಆತ್ಮ. ‘ಸ್ವ’ ನಮ್ಮ ನಿರಂತರ ಮತ್ತು ಶಾಶ್ವತ ರೂಪವಾಗಿದೆ. ಸಾಂಸ್ಕೃತಿಕ ದೃಷ್ಟಿಕೋನದಲ್ಲಿ ನಮ್ಮ ಭಾಷೆ, ರಾಷ್ಟ್ರಧರ್ಮ, ಸಂಸ್ಕೃತಿ, ನಾಗರಿಕತೆ, ವಚನಗಳು, ಆಚರಣೆ, ಹಬ್ಬಗಳು, ನದಿಗಳು, ಪರ್ವತಗಳು, ಕಾಡುಗಳು, ದೇವತೆಗಳು, ಋಷಿಗಳು, ಪಠ್ಯಗಳು, ಧರ್ಮಗ್ರಂಥಗಳು ಎಲ್ಲವೂ ಒಂದೇ ಆಗಿರುತ್ತದೆ. ಈ ‘ಸ್ವ’ದಿಂದಲೇ ನಾವು ಅಹಂಭಾವವನ್ನು ಹೊಂದುತ್ತೇವೆ. ಇದನ್ನು ಅರಿಯುವುದು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ. ಜಾಗತಿಕ ದೃಷ್ಟಿಕೋನದಲ್ಲಿ ‘ಸ್ವ’ವನ್ನು ನಮಗೆ ಮಾತ್ರವಲ್ಲ, ಪ್ರಪಂಚದ ಕಲ್ಯಾಣಕ್ಕಾಗಿ ಜಾಗೃತಗೊಳಿಸುವುದು ಮತ್ತು ಪ್ರಚುರಗೊಳಿಸುವುದು. ಇಂತಹ ಅವಸ್ಥೆಯಲ್ಲಿ ಪ್ರತಿಯೊಂದು ಚಿಂತನೆಯೂ, ಪ್ರತಿಯೊಂದು ಕೆಲಸವೂ ವೈಶ್ವಿಕ ಮಟ್ಟದಲ್ಲಿ ಇರುತ್ತದೆ. ಆದ್ದರಿಂದ ಭಾರತದ ಸ್ವದೇಶೀ ಚಿಂತನೆಯು ಭೌಗೋಳಿಕ ಮಿತಿಯನ್ನು ಮೀರಿದ್ದು. ಈ ಅವಸ್ಥೆಯಲ್ಲಿ ಮಾಡುವ ಪ್ರತಿಯೊಂದು ಕಾರ್ಯಕ್ಕೆ ಬೇಕಾಗುವ ಸಹಾಯ, ಉಪಕರಣಗಳು, ವಸ್ತುಗಳು ಎಲ್ಲವೂ ಸ್ವದೇಶಿಯಾಗಿರುತ್ತವೆ ಎನ್ನುವುದು.
ಉದಾಹರಣೆಗೆ, ಫ್ರಾನ್ಸ್ ದೇಶದಿಂದ ನಾವು ನಮ್ಮ ರಕ್ಷಣಾ ಕಾರ್ಯಕ್ಕೆ ಕೊಂಡುಕೊಳ್ಳುವ ಯುದ್ಧವಿಮಾನ ನಮ್ಮ ಸ್ವದೇಶೀ ಚಿಂತನೆಯನ್ನು ವೈಶ್ವಿಕಗೊಳಿಸುವುದಕ್ಕೆ ಪೂರಕವಾಗಿದೆ. ವಸ್ತು ವಿದೇಶಿಯದ್ದಾದರೂ ಗುರಿ ಸ್ವದೇಶಿಯಾಗಿದೆ. ಹಾಗೆಯೇ ಭಾರತದಲ್ಲಿ ಗೋವುಗಳನ್ನು ಕೊಂದು ಅದರಿಂದ ತಯಾರಾಗುವ ವಸ್ತುಗಳು, ಚಪ್ಪಲಿ, ಬ್ಯಾಗ್ಗಳು, ಗ್ಲೌಸ್, ಜಾಕೆಟ್ ಇತ್ಯಾದಿಗಳನ್ನು ಇಲ್ಲಿಯೇ ತಯಾರಿಸಿ ರಫ್ತು ಮಾಡುತ್ತಾರೆ. ವಿದೇಶಿ ವಿನಿಮಯದಲ್ಲಿ ಗೋಮಾಂಸ ಹೆಚ್ಚಾಗಿ ರಫ್ತಾಗುತ್ತದೆ. ಇವುಗಳು ಇಲ್ಲೇ ತಯಾರಾದರೂ ದೇಶಕ್ಕೆ ಮಾರಕವಾದ ಈ ವಸ್ತುಗಳನ್ನು ಸ್ವದೇಶಿ ಎಂದು ಸ್ವೀಕರಿಸಲಾಗುತ್ತದೆಯೇ ಎಂದರೆ ಇಲ್ಲ.
ಅಹಿಂದುಗಳ ಬಗ್ಗೆ ಸ್ಪಷ್ಟ ವಿಚಾರ
ಇಂದು ಪ್ರಪಂಚದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಇರುವ ಅಭಿಪ್ರಾಯ ಬೇರೆ ಸಮುದಾಯಗಳಿಗಿಂತ ಭಿನ್ನವಾಗಿದೆ. ಆದರೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಎಲ್ಲರೂ ಒಂದೇ ಎಂದು ಹೇಳಲು ಬರುವುದಿಲ್ಲ. ಕೆಲವು ಉಗ್ರವಾದಿ ಸಂಘಟನೆಯ ದುಷ್ಕೃತ್ಯಗಳಿಗೆ ಇಡೀ ಮುಸ್ಲಿಂ ಸಮುದಾಯವನ್ನು ನಿಂದಿಸಲಾಗುವುದಿಲ್ಲ. ಅದರಲ್ಲೂ ಭಾರತೀಯರೇ ಆಗಿದ್ದು ಮತಾಂತರಗೊಂಡಿರುವ ಭಾರತೀಯ ಮುಸ್ಲಿಮರ ಬಗ್ಗೆ ಡಾಕ್ಟರ್ ಜೀ ಅವರ ಚಿಂತನೆ ಕೊಂಚ ಭಿನ್ನ. ಡಾಕ್ಟರ್ ಜೀ ಅವರು ಮುಸ್ಲಿಮರ ವಿಚಾರದಲ್ಲಿ ತಮ್ಮ ಕಣ್ಣಮುಂದೆ ಕಾಣುವ ಎರಡು ಅಭಿಪ್ರಾಯಗಳನ್ನು ಗಮನಿಸಿದ್ದರು. ಒಂದು ಗಾಂಧೀಜಿಯವರು ಮುಸಲ್ಮಾನರ ಪ್ರತ್ಯೇಕತಾವಾದ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಮುಸಲ್ಮಾನರು ಹಿಂದೂಗಳಂತೆ ಭಾಗವಹಿಸುತ್ತಿರಲಿಲ್ಲ. ಏಕೆಂದರೆ ಧರ್ಮ ರಾಷ್ಟ್ರಕ್ಕಿಂತ ಮೊದಲು ಎನ್ನುವ ವಿಚಾರ. ಇದಕ್ಕಾಗಿ ಗಾಂಧೀಜಿಯವರು ಮುಸಲ್ಮಾನರ ವಿಷಯದಲ್ಲಿ ಅತಿಯಾದ ಉದಾರತೆಯನ್ನು ತೋರಿಸಿ ಅವರ ಜೊತೆ ರಾಜಿ ಒಪ್ಪಂದದ ನಡುವಳಿಕೆ ಮೂಲಕ ಮುಸಲ್ಮಾನರ ಹೃದಯವನ್ನು ಗೆಲ್ಲಬೇಕು ಎಂಬ ಅಭಿಪ್ರಾಯದವರಾಗಿದ್ದರು. ಇನ್ನೊಂದು ಕಡೆ ಹಿಂದೂ ಮಹಾಸಭಾದ ನಾಯಕರು, ಬಹುಸಂಖ್ಯಾತರು ಉಗ್ರವಾದ ಶಕ್ತಿಯ ಮೂಲಕವೇ ಮುಸಲ್ಮಾನರನ್ನು ಸರಿಮಾಡಬೇಕು ಎಂಬ ಅಭಿಪ್ರಾಯದವರು. ಆದರೆ ಡಾಕ್ಟರ್ ಜೀ ಅವರು ವಿಷಯವನ್ನು ಮೌಲಿಕ ತುಲನೆ ಮಾಡುತ್ತಾ ಹಿಂದೂಗಳು ಸಂಘಟಿತರಾಗಿ ತಮ್ಮ ಶಕ್ತಿಯಿಂದ ಸಾಮಾಜಿಕ ದೋಷಗಳನ್ನು ಸರಿಪಡಿಸಿಕೊಳ್ಳುತ್ತಾ ರಾಷ್ಟ್ರನಿಷ್ಠೆಯನ್ನು ಗಟ್ಟಿಮಾಡಿಕೊಂಡರೆ, ಮುಸಲ್ಮಾನರಲ್ಲೂ ಈ ಮಾನಸಿಕತೆಯ ಶಾಶ್ವತ ಪರಿವರ್ತನೆ ತರಲು ಸಾಧ್ಯ ಮತ್ತು ಅದೇ ಏಕಮಾತ್ರ ವಿಧಾನ ಎಂದು ಹೇಳುತ್ತಿದ್ದರು. ಕೆಲವೊಮ್ಮೆ ತಥಾಕಥಿತ ಕಟ್ಟರ್ ಮುಸ್ಲಿಂ ನಾಯಕರು ಮತ್ತು ಮೌಲ್ವಿಗಳ ವರ್ತನೆ ಕಂಡರೆ ದೇಶದ ನಾಗರಿಕರು ಮುಸಲ್ಮಾನರಲ್ಲಿ ಪರಿವರ್ತನೆ ಅಸಾಧ್ಯ, ಇದೊಂದು ರೋಡ್ ಬ್ಲಾಕ್ ಎಂಬ ನಿಲುವಿಗೆ ಬಂದುಬಿಡುತ್ತಾರೆ. ಡಾಕ್ಟರ್ ಜೀ ಅವರ ಚಿಂತನೆಯ ಹಾದಿಯಲ್ಲಿ ಕ್ರಮಿಸಿದಾಗ ಇದೊಂದು ರೋಡ್ ಬ್ಲಾಕ್ ಎಂದು ಎನಿಸದೆ, ಹಾದಿ ಕಷ್ಟಕರವಾದರೂ, ಗುರಿ ಸಾಧ್ಯ ಎಂಬ ಅಶಾಭಾವನೆ ಮೂಡುತ್ತದೆ. ಮುಸ್ಲಿಮರ ವಿಷಯದಲ್ಲಿ ಪರಿವರ್ತನೆಯ ಫಲಿತಾಂಶವನ್ನು ನಾವು ಈಗಾಗಲೇ ನೋಡಲಾರಂಭಿಸಿದ್ದೇವೆ.
ಡಾಕ್ಟರ್ ಜೀ ಅವರು ಗಾಂಧಿವಾದವನ್ನು ಒಂದು ವಿಚಾರ ಎಂದು ಪರಿಗಣಿಸದೆ, ಅದೊಂದು ಜೀವನ ಶೈಲಿ ಎಂದು ತಿಳಿದಿದ್ದರು. ಆದರೆ “ಯಾವುದೋ ವ್ಯಕ್ತಿಯ ಹೆಸರಿನಲ್ಲಿ ‘ವಾದ’ವನ್ನು ಹುಟ್ಟುಹಾಕಿ ಅವನ ಅನುಯಾಯಿಗಳು ಎನ್ನಿಸಿಕೊಳ್ಳುವವರು, ವ್ಯಕ್ತಿಯ ಬಾಹ್ಯ ಆಚರಣೆಗಳ ‘ಕರ್ಮಕಾಂಡ’ವನ್ನೇ ಸರ್ವಸ್ವ ಎಂದು ತಿಳಿದಿರುತ್ತಾರೆ. ಗಾಂಧೀಜಿಯವರ ಮೂಲ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಬದಲು ಬಾಹ್ಯ ಆಚರಣೆಗಳನ್ನು ಗಾಂಧಿವಾದವೆನ್ನುವುದು ಸರಿಯಲ್ಲ” ಎಂದು ಹೇಳುತ್ತಿದ್ದರು. ಮುಂದೆ ಅವರು ತಮ್ಮ ಕಠೋರ ನುಡಿಗಳಲ್ಲಿ “ಮಹಾತ್ಮಾ ಗಾಂಧೀ ಕಿ ಜೈ ಎನ್ನುತ್ತಾ ತಮ್ಮ ಕೈಗಳನ್ನೆತ್ತುವ ಮೂಲಕ ಅವರ ಕಾರ್ಯಕ್ರಮಗಳ ಸಮರ್ಥನೆ ಮಾಡುವವರು, ಅವರ ಪ್ರತ್ಯಕ್ಷ ಬದುಕಿನಲ್ಲಿ ಗಾಂಧೀಜಿಯವರ ಆದರ್ಶಗಳ ಲೇವಡಿ ಮಾಡುತ್ತಾ ಐಷಾರಾಮದ ಜೀವನ ನಡೆಸುವವರು ಎಲ್ಲಿಯವರೆಗೆ ಇರುತ್ತಾರೋ, ಅಲ್ಲಿಯವರೆಗೂ ಗಾಂಧೀವಾದವು ಸಫಲವಾಗುವ ಸಂಭವವಿಲ್ಲ” ಎಂದಿದ್ದರು. ಗಾಂಧೀಜಿಯವರು ತೀರಿಕೊಂಡ 78 ವರ್ಷಗಳ ನಂತರವೂ ಭಾರತದಲ್ಲಿ ಬದಲಾವಣೆ ಕಂಡಿಲ್ಲ. ಈಗಲೂ ಗಾಂಧೀಜಿಯವರ ಅನುಯಾಯಿಗಳು ಎಂದು ಮುಂಚೂಣಿಯಲ್ಲಿರುವ ನಾಯಕರ ವರ್ತನೆಗಳು ಅಕ್ಷರಶಃ ಡಾಕ್ಟರ್ ಜೀ ಅವರ ಮಾತುಗಳಂತೆ ಮುಂದುವರಿದಿರುವಂತೆ ಇದೆ.
ಡಾಕ್ಟರ್ ಜೀ ಸ್ಪಷ್ಟ ಚಿಂತನೆ
ಕೆಲವೊಮ್ಮೆ ಹೊರಗಡೆಯಿಂದ ನೋಡುವ ಮೂರನೇ ವ್ಯಕ್ತಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮಾತುಗಳು ಪೂರ್ವಾಗ್ರಹ (biased) ಎಂದು ಅನಿಸಬಹುದು. ಆದರೆ ಇದು ವಾಸ್ತವ ಎಂದು ಅವರು ತಿಳಿಯಬೇಕಾದರೆ ಸಂಘವನ್ನು ಒಳಗಡೆ ಬಂದು ನೋಡಿ, ಅನುಭವಿಸಿ ನಿಷ್ಕರ್ಷೆಗೆ ಬರಬೇಕು. ಆಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ಹಾಗೂ ಸಮಾಜಮುಖಿ ಕಾರ್ಯಗಳು ಡಾ. ಹೆಡಗೆವಾರ್ ಅವರ ಚಿಂತನೆಗಳ ವ್ಯಕ್ತರೂಪ (It is a manifestation of thoughts of Dr. Keshava Baliram Hedagewar) ಎಂದು ಸ್ಪಷ್ಟವಾಗದೇ ಇರಲಾರದು.
