“ನಾನೃಷಿಃ ಕುರುತೇ ಕಾವ್ಯಂ” ಎಂಬುದೊಂದು ಸಂಸ್ಕೃತದ ಸುಭಾಷಿತ. ಋಷಿಯಲ್ಲದವನು ಕಾವ್ಯ ರಚಿಸಲಾರ ಎಂಬುದು ಇದರ ಅರ್ಥ. ಋಷಿ ಎಂದ ಕೂಡಲೇ ಜಟೆ, ಗಡ್ಡ, ಬರಿಮೈ, ದಂಡ ಕಮಂಡಲುಗಳ ಚಿತ್ರಣವನ್ನು ಕಲ್ಪಿಸಬೇಡಿ. ಕೇವಲ ಸಾಲುಗಳನ್ನು ಅಡ್ಡ- ಉದ್ದ ಬರೆಯದೇ, ಪ್ರತೀಪದಕ್ಕೂ ಆಳವಾದ ಅರ್ಥ ಬರುವ ಹಾಗೆ, ಎಲ್ಲಿ, ಯಾವುದನ್ನು, ಹೇಗೆ, ಎಷ್ಟು ಬಳಸಬೇಕೋ ಅಷ್ಟನ್ನೇ ಬಳಸಿ ಬರೆಯುವ ಔಚಿತ್ಯವನ್ನು ಹೊಂದಿದವನು ಕವಿ ಅರ್ಥಾತ್ ಋಷಿ ಎಂಬರ್ಥದಲ್ಲಿ ಈ ಸಾಲು ಇದೆ. ವ್ಯಾಸ, ವಾಲ್ಮೀಕಿ, ಭಾಸ, ಕಾಳಿದಾಸ ಮುಂತಾದವರು ಋಷಿಗಳು. (ಈಗಿನ ಕವಿಗಳು ಮತ್ತು ಕಾವ್ಯವನ್ನು ಗಮನಿಸಲು ಹೋಗಬೇಡಿ ದಯವಿಟ್ಟು.) ಇಂತಹ ಋಷಿಗಳು ಕನ್ನಡದಲ್ಲಿ ಹಲವರಿದ್ದರು, ಕೆಲವರಿದ್ದಾರೆ.
ಹೀಗೆ ಅಳತೆ ಮಾಡಿಟ್ಟು ಅಳವಡಿಸಿದ ಹಾಗೆ, ಎಲ್ಲೂ ಕೊಂಕಾಗದ ಹಾಗೆ ಬರೆದಿಟ್ಟ ಅಲ್ಲಲ್ಲಿ ಕೊರೆದಿಟ್ಟ ಶಿಲ್ಪದಂತಹ ಕವಿತೆಗಳು ಕನ್ನಡದಲ್ಲಿ ಸಾಕಷ್ಟಿವೆ. ಪ್ರತೀ ಬಾರಿ ಓದುವಾಗಲೂ ವಿಶಿಷ್ಟ ಅರ್ಥವನ್ನು ಕೊಟ್ಟು ಹೌದಲ್ಲ! ಎಂಬ ಖುಷಿಯನ್ನು ತರುತ್ತವೆ.
ಇತ್ತೀಚಿಗೆ ಒಂದು ಕವಿತೆ ಬಹಳ ಕಾಡುತ್ತಿದೆ. ಪ್ರತೀಬಾರಿ ಆಲಿಸಿದಾಗಲೂ ಒಂದೊಂದು ಹೊಳಹು. ಕವಿತೆಯ ಲಕ್ಷಣದಲ್ಲಿ ಇದು ಸಾಮಾನ್ಯ. ಯಾಕೆಂದರೆ ಯಾವ ಕವಿತೆಗೂ ಎಲ್ಲಾ ಕಾಲದಲ್ಲೂ ಒಂದೇ ಅರ್ಥ ಅಥವಾ ಸಾರ್ವತ್ರಿಕ ಅಭಿಪ್ರಾಯ ಎಂಬುದು ಇರುವುದಿಲ್ಲ. ಅದನ್ನು ಬರೆದ ಕಾಲಘಟ್ಟಕ್ಕೂ ಅದನ್ನು ಓದುವ ಕಾಲಕ್ಕೂ, ಓದುವವನ ಮನಸ್ಥಿತಿಗೂ ಕವಿತೆಯ ವ್ಯಾಕರಣ ಬದಲಾಗುತ್ತಲೇ ಇರುತ್ತದೆ. ಸ್ವತಃ ಕವಿಯೇ ಬಂದು ಅದನ್ನು ವ್ಯಾಖ್ಯಾನ ಮಾಡಲು ಕೂತರೂ, ಅವನ ಪ್ರಜ್ಞೆ ಮತ್ತೇನನ್ನೋ ಧ್ವನಿಸುತ್ತದೆ.
ಇರಲಿ, ನಾನು ಓದಿ, ಆಲಿಸಿ, ಮನಸ್ಸಿನ ತುಂಬಾ ತುಂಬಿಕೊಂಡದ್ದು ಈ ಗೀತೆ:
“ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖೀ”
ಇದನ್ನು ಯಾವ ಕಾಲದಲ್ಲಿ ಕಲಿತು ಹಾಡಿದ್ದೆನೋ, ನೆನಪಿಲ್ಲ
ಕೃಷ್ಣನನ್ನು ಪ್ರೀತಿಸಲು ತೊಡಗಿದ ದಿನದಿಂದ ಅವನಿಗೆ ಸಂಬಂಧಿಸಿದ ಎಲ್ಲವೂ ಪ್ರಿಯವಾಗಿ, ಎಲ್ಲವನ್ನೂ ಕಲಿತು ಹಾಡುವುದೇ ಬದುಕಾಗಿ ಹೋಗಿದ್ದು ಹಳೆಯ ವಿಚಾರ. ಇದನ್ನು ಆಲಿಸುವ ಕಾಲದಿಂದಲೂ ಅಂತಹಾ ವಿಶಿಷ್ಟ ಸಂಗತಿಯಾಗಿ ನಾನು ಭಾವಿಸಲೇ ಇಲ್ಲ. ಮತ್ತದು ಇಷ್ಟವಾಗಿದ್ದು ಅದಕ್ಕೆ ಅಳವಡಿಸಿದ ರಾಗದ ಕಾರಣದಿಂದ. ಸಿಂಧು ಭೈರವಿ ನನ್ನ ಅತ್ಯಂತ ಪ್ರೀತಿಯ ರಾಗ. ಬಹುಶಃ ಆ ರಾಗದ ಜಾಹೀರಾತು ಬಂದರೂ ನಾನು ಆಲಿಸುತ್ತೇನೆ, ಅಷ್ಟರ ಮಟ್ಟಿಗೆ ಪ್ರಿಯವಾದ ರಾಗ ಅದು. ಜೊತೆಗೆ ಮಾಲತಿ ಶರ್ಮ, ರತ್ನಮಾಲಾ ಪ್ರಕಾಶ್ ಇಬ್ಬರೂ ಅದ್ಭುತವಾಗಿ ಅದನ್ನು ಹಾಡಿದ್ದಾರೆ. ಸಂಯೋಜನೆ ಬಹಳ ಚೆನ್ನಾಗಿದೆ. ಆದರೂ ಅಷ್ಟೂ ಚರಣಗಳು ಒಂದೇ ಧಾಟಿಯಲ್ಲಿ ಇರುವ ಬದಲು ಒಂದು ಚರಣವನ್ನು ಧ್ವನಿಯೇರಿಸಿ ಹಾಡಬೇಕಿತ್ತು ಎಂದು ಅನಿಸುತ್ತಿತ್ತು. “ಹೈ ನೋಟ್” ಮಾಡಿದ್ದರೆ ಇನ್ನೂ ಅದ್ಭುತವೆನಿಸುತ್ತಿತ್ತು, ಎನ್ನುತ್ತಾ ನಾನೇ ಹಾಡಿಕೊಳ್ಳುತ್ತಿದ್ದೆ. ಅದಕ್ಕೆ ಸರಿಯಾಗಿ ಮೊನ್ನೆಯಷ್ಟೇ ಯಕ್ಷಗಾನದ ಭಾಗವತರಾದ ಕಾವ್ಯಶ್ರೀ ಅಜೇರು ಕೂಡ ಬಹು ಸೊಗಸಾಗಿ ಹಾಡಿದ್ದನ್ನು ಆಲಿಸಿದೆ. ಇದನ್ನು ಆಲಿಸಿದ ಮೇಲೆಯೇ ಈ ಹಾಡಿನ ಮೇಲೆ ವಿಪರೀತ ಮೋಹವಾಗಿ, ಅದು ಆಧ್ಯಾತ್ಮಕ್ಕೆ ತಿರುಗಿತು. ಅದು ಇನ್ನೇನೋ ಆಗುವ ಮೊದಲು ಬರೆದುಬಿಡಬೇಕೆಂದು ಕೂತದ್ದು.
ಈ ಹಾಡಿನ ಶೀರ್ಷಿಕೆ “ಆತ್ಮನಿವೇದನೆ”.
ನಿವೇದನೆ ಎಂಬ ಪದ ಬಹು ಆಪ್ತವಾದದ್ದು ಮತ್ತು ಅರ್ಥಗರ್ಭಿತವಾದದ್ದು. ವಸ್ತುವನ್ನು ಇಟ್ಟು ನೈವೇದ್ಯ ಮಾಡುವುದಲ್ಲ, ಬದಲಾಗಿ ಆತ್ಮವನ್ನು, ತನ್ನತನವನ್ನು ನಿವೇದಿಸಿಕೊಳ್ಳುವುದು. ಈ ಪದಗಳು ಅಥವಾ ಇಂಥದ್ದೊಂದು ಪರಿಕಲ್ಪನೆ ಎಷ್ಟು ಚಂದ!
ಇಬ್ಬರು ಹೆಂಗಸರು, ಆ ಕಾಲದ ಭಾಷೆಯಾದರೆ ಗೋಪಿಕೆಯರು, ಹಾಲು ಮಾರುವವರು ಎಂದುಕೊಳ್ಳೋಣ. ಅವರ ನಡುವಿನ ಸಂಭಾಷಣೆಯ ರೀತಿಯಲ್ಲಿ ಕವಿತೆ ಇದೆ. ಒಂದು ಬಾರಿ ಕವಿತೆಯನ್ನು ಓದಿಕೊಂಡರೆ ಸಾಕು, ಇಡೀ ಸನ್ನಿವೇಶ ಎದೆಗಿಳಿಯುತ್ತದೆ.
“ಬೃಂದಾವನಕ್ಕೆ ಹಾಲು ಮಾರಲು ಹೋಗೋಣ ಬಾರೆ” ಈ ಸಾಲು ಆಲಿಸುವಾಗಲೇ, ಹೇಳಿಕೇಳಿ ಬೃಂದಾವನ, ಅಲ್ಲಿರುವುದೇ ಗೋವಳರು, ಹಾಲು ಮೊಸರು ಬೆಣ್ಣೆ ತುಪ್ಪ ತಯಾರಿಸಿ ಮಾರುವುದೇ ಅವರ ಬದುಕು. ಅಲ್ಲಿಗೆ ಬೃಂದಾವನದವರಲ್ಲದ ಈ ಹೆಂಗಸರು ಹಾಲು ಮಾರಲು ಹೋಗುತ್ತಾರೆ! ಒಮ್ಮೆ ಯೋಚಿಸಿ, ವಸ್ತುವೊಂದು ಇದ್ದ ಮನೆಯಲ್ಲಿ ಮತ್ತೆ ಮಾರಲು ಹೋದರೆ ಯಾರು ಕೊಳ್ಳುತ್ತಾರೆ? ಇಡೀ ಬೃಂದಾವನದಲ್ಲಿ ಹಾಲು ಮೊಸರು ಅಥವಾ ಗೋ ಉತ್ಪನ್ನಗಳು ಯಥೇಚ್ಛವಾಗಿದೆ, ಆದರೂ ಇವರಿಬ್ಬರು ಮಾರಲು ಅಲ್ಲಿಗೇ ಹೊರಟಿದ್ದಾರೆ.
ಮತ್ತೊಬ್ಬಳು ಕೇಳುತ್ತಾಳೆ, “ಬೃಂದಾವನದಿ ಹಾಲನು ಕೊಳ್ಳುವರು ಯಾರಿಹರೇ” ಅವಳಿಗೆ ಗೊತ್ತು, ಅಲ್ಲಿ ಕೊಳ್ಳುವವರು ಯಾರೂ ಇಲ್ಲ, ಎಲ್ಲರ ಮನೆಯಲ್ಲೂ ಸಾಕಷ್ಟಿದೆ. ಇರುವುದಷ್ಟೇ ಅಲ್ಲ,ಮಾರುವಷ್ಟಿದೆ. ನಾವು ಹೋಗಿ ಏನು ಪ್ರಯೋಜನ?
ಇವಳೆನ್ನುತ್ತಾಳೆ, “ಗೋವನು ಕಾಯುವ ಗೋವಿಂದನಿಹನೇ, ಹಾಲನು ಕೊಳ್ಳುವ” ಎಷ್ಟು ಚಂದದ ಪದ ಪ್ರಯೋಗ ನೋಡೀ, ಅವನು ದನವನ್ನು ಕಾಯುತ್ತಾನೆ, ಅವನೇ ಹಾಲನ್ನೂ ಕೊಳ್ಳುತ್ತಾನೆ, ಅವನ ಬಳಿ ಇದ್ದರೂ ಮತ್ತೆ ಕೊಳ್ಳುತ್ತಾನೆ, “ಇದ್ದರೂ ಕೊಳ್ಳುವುದು” ದುರಾಸೆಯಲ್ಲ, ತಾನು ಕೊಂಡರೆ ಇನ್ನೊಬ್ಬರಿಗೆ ಉಪಕಾರವಾಗಬಹುದೆಂಬ ಹೃದಯ ವೈಶಾಲ್ಯ ಅವನಿಗಿದೆ, ಮತ್ತವನು ಹಾಲು ಕೊಂಡು ಈ ಹೆಂಗಸರಿಗೆ ಕೊಡುವುದು ಚಿನ್ನ ರನ್ನವಲ್ಲ, ಬದಲಾಗಿ “ತನ್ನನೇ ಕೊಡುವನು”! ಎಂತಹ ಉದಾತ್ತತೆ, ಚಿನ್ನ ರನ್ನವೇ ಮಿಗಿಲಾದ ಕಾಲದಲ್ಲಿ, ಅದಕ್ಕಿಂತಲೂ ಮೀರಿದ್ದು “ಅವನು”. ಅವನನ್ನೇ ಕೊಟ್ಟುಕೊಳ್ಳುತ್ತಾನೆ.
ಇಲ್ಲಿಗೆ ಒಂದು ಅಂದಾಜು ಸಿಕ್ಕಿತು,
ಈ ಹೆಂಗಸರು ಅಲ್ಲಿಗೆ ಹೋಗಬಯಸುವುದು ಹಾಲು ಮಾರುವುದಕ್ಕಷ್ಟೇ ಅಲ್ಲ, ಅವನನ್ನು ಪಡೆಯಲು. ಹಾಗಂತ ಉಚಿತವಾಗಿ ಕೊಟ್ಟು ಬರುವ ಯೋಚನೆಯಿಲ್ಲ, ಮಾರುವ ಉದ್ದೇಶವೇ ಇದೆ. ಹಾಲನ್ನು ಮಾರಿ, ಅವನನ್ನ ಪಡೆಯುವ ಹಂಬಲ. ಅಂದರೆ ಅವರಿನ್ನೂ ವ್ಯಾವಹಾರಿಕ ಪ್ರಪಂಚದಲ್ಲಿ ಇದ್ದಾರೆ. ಹಾಲು ಮಾರಲು ಬರುವ ಹೆಂಗಸರಿಗೆ ತನ್ನನ್ನೇ ಕೊಡುವಷ್ಟು ಉದಾತ್ತ ಅವನು, ಬಹುಶಃ ಅವನು ಮೋಹದೊಳಗೇ ಮುಳುಗಿದ ನಿರ್ಮೋಹಿ, “ಉಂಡುಪವಾಸಿ, ಬಳಸಿ ಬ್ರಹ್ಮಚಾರಿ”
ಇದಾದ ನಂತರ ಗೆಳತಿಗೆ ಹೇಳುತ್ತಾಳೆ, ಕಣ್ಣನು ಮೋಹಿಪ ಪೀತಾಂಬರ ಧರಿಸು, ಬಣ್ಣಬಣ್ಣದ ಬಳೆ ಹಾಕಿಕೋ, ಅವನನ್ನು ಮೋಹಿಸುವ ಎದೆಯ ಮೇಲೆ ಹಾರಗಳನ್ನು ಧರಿಸು, ನೂಪುರ ಹಾಕಿಕೋ, ಗೋಪಿ ಚಂದನ ಹಚ್ಚಿಕೋ ಇತ್ಯಾದಿ, ಅವನನ್ನು “ಮೋಹಿಸುವ” ಸಕಲೆಂಟು ಅಲಂಕಾರ ಮಾಡಿಕೊಳ್ಳಲು ತಿಳಿಸುತ್ತಾಳೆ, ಈ “ಹೋಗೋಣ ಬಾ, ಅಲಂಕರಿಸಿಕೋ” ಎಂದೆಲ್ಲ ಹೇಳುವವಳು ಮತ್ತೊಬ್ಬಳಿಗಿಂತ ತುಸು ತಿಳಿದವಳು, ಅವಳಿಗೆ ಬೃಂದಾವನದವನು ಗೊತ್ತು, ಅವನನ್ನು ಮೋಹಿಸಬೇಕೆಂಬ ಆಸೆಯೂ ಇದೆ. ಅದಕ್ಕಾಗಿ ಜೊತೆಗೊಬ್ಬಳನ್ನು ಕರೆದುಕೊಂಡು ಹೊರಟಿದ್ದಾಳೆ. ಆದರೆ ಜೊತೆಗಿದ್ದವಳು ಇನ್ನೂ ಮುಗ್ಧೆ, ಇವಳ ಬಳಿ ಪ್ರಶ್ನಿಸುತ್ತಾಳೆ, ಹಾಲು ಮಾರಲು ಹೋಗುವುದಕ್ಕೆ ಈ ಅಲಂಕಾರ ಏಕೆ ಎಂಬ ಪ್ರಶ್ನೆಯೂ ಇಲ್ಲಿ ಬರುತ್ತದೆ. ಆದರೆ ಮಾರುವುದಕ್ಕಿಂತ ಮುಖ್ಯವಾದುದು ಬೇರೆಯದೊಂದು ಇರುವುದಕ್ಕೆ ಅವಳು ಹೇಳಿದಂತೆ ತಯಾರಾಗುತ್ತಾಳೆ. ಇಹದ ಸೌಂದರ್ಯದಿಂದ ಅವನನ್ನು ಪಡೆತುವ ಪ್ರಯತ್ನ. ಅವನಿಗೆ ಬೇಕಾದುದು ಬಾಹ್ಯ ಸೌಂದರ್ಯವೇ? ಅಥವಾ ಅಂತರಂಗದ ಅರ್ಪಣೆಯೇ?
ಅಂತೂ ತಯಾರಾಗಿ ಇಬ್ಬರೂ ಹಾಲು ಮಡಕೆ ತಲೆಯ ಮೇಲಿಟ್ಟು ಹೊರಡುತ್ತಾರೆ, ಹೋಗುವುದು ಬೃಂದಾವನಕ್ಕೆ, ಸರಿ. ಆದರೆ ಅವನು ಅಲ್ಲಿದ್ದಾನಾ? ಇದ್ದರೂ ಸಿಗುತ್ತಾನಾ? ಸಿಕ್ಕಿದರೂ ಇವರು ತಂದದ್ದನ್ನು ಅವನು ಕೊಳ್ಳುತ್ತಾನಾ? ಅಲ್ಲೆಲ್ಲಿ ಇರುತ್ತಾನೆ? ಇಷ್ಟಕ್ಕೂ ಬೃಂದಾವನದೊಳಗೆ ಹೋಗಿಮಾಡುವುದಕ್ಕೇನಿದೆ? ಇವರಿಗೆ “ಮಾರುವುದು” ಮುಖ್ಯವಾದರೂ, ಕೊಳ್ಳುವ ವ್ಯಕ್ತಿ ಅದಕ್ಕಿಂತ ಮುಖ್ಯ.
ಹಾಗಾಗಿ,
“ಯಮುನಾತೀರದಲಲೆಯುವ ಬಾರೆ, ಹಾಲು ಬೇಕೆ ಹಾಲೆಂದು ಸಖಿ” ಅಲೆಯುವುದು ಎಂಬ ಪದಕ್ಕೆ, ಯಾವುದೇ ಕಾರಣವಿಲ್ಲದೇ ನಡೆದಾಡುವುದು ಎಂಬರ್ಥವಿದೆ. ಅವಳಿಗೆ ಗೊತ್ತು, ಅವನು ಯಮುನೆಯ ತೀರದಲ್ಲಿ ಗೋವನ್ನು ಕಾಯುತ್ತಾ ಇರುತ್ತಾನೆ, ಅಲ್ಲಿ ಹೋಗಿ ಹಾಲು ಬೇಕಾ ಹಾಕು? ಎಂದು ಅಲೆದಾಡಿದರೆ ಸಾಕು, ಹಾಲು ಬೇಕೆ ಎಂದು ಕೂಗಿ ಕರೆಯುವಾಗ, ಅವನು ಕಾಣುತ್ತಾನೆ, ಈ ಹಾಲು ಮಾರುವ ನೆಪ ಮಾಡಿಕೊಂಡು ಅವನನ್ನು ಮೋಹಿಸಿಬಿಡೋಣ, ಒಮ್ಮೆ ಸಿಕ್ಕಿದರೆ ಸಾಕು, ಸಾಕು ಏನು, ಸಿಕ್ಕಿಯೇ ಸಿಗುತ್ತಾನೆ. ಸಿಕ್ಕಿದ ಮೇಲೆ ಮುಗಿಯಿತು, ಅವನು ದಕ್ಕುತ್ತಾನೆ. ಇವರು ಬಯಸುವ ಆ ಕೊಳ್ಳುಗ ಸಿಗುವತನಕ ಹೀಗೆಯೇ ಅಲೆದಾಡಿದರೆ ಸಾಕು, ಬೇರೆಯವರಿಗೆ ಮಾರಿ, ಹಣ ಮಾಡುವ ಆಲೋಚನೆಯೇನೂ ಇಲ್ಲವಲ್ಲ!
ಇಲ್ಲಿಂದ ಮುಂದೆ ಕವಿತೆಯ ಭಾವ ಅಥವಾ ಈ ಹೆಂಗಸರ ಮನ ಬದಲಾಗುತ್ತದೆ. “ಹಾಲನು ಮಾರಿ ಹರಿಯನು ಕೊಳ್ಳುವ” ಯೋಚನೆ ಬದಲಾಗಿ, ಹಾಲ ನಿವೇದಿಸಿ ಆತ್ಮವನರ್ಪಿಸುವ ಭಾವ ಬಂದುಬಿಡುತ್ತದೆ. ಅವನ ಯೋಚನೆಯೇ ಸಾಕು, ಮನದೊಳಗಿನ ಲಾಭದ ಆಸೆ ದೂರವಾಗಲು, ಸ್ವಾರ್ಥ ಅಳಿಯಲು, ಸಮರ್ಪಣಾ ಭಾವದಲ್ಲಿ ಪ್ರೇಮಿಸಲು.
“ಹಾಲ ನಿವೇದಿಸಿ ಆತ್ಮವನರ್ಪಿಸಿ ಮುಕ್ತಿಯ ಹೊಂದುವ ಸೌಮ್ಯಮುಖಿ”
ಹಾಲನ್ನು ಮಾರುವ ಬದಲು ಅವನಿಗೆ ನೈವೇದ್ಯ ಮಾಡಿ, ತಮ್ಮಾತ್ಮವನ್ನೇ ಅರ್ಪಿಸಿ ಮುಕ್ತಿಯನ್ನು ಹೊಂದುವ ತವಕ ಅವರಿಗುಂಟಾಗುತ್ತದೆ. ವ್ಯಾವಹಾರಿಕ ಜಗತ್ತಿನ ಕತ್ತಲಿನಿಂದ ಅವರು ಅಧ್ಯಾತ್ಮದತ್ತ ವಾಲಿಬಿಟ್ಟರು! ಹಾಲನ್ನು ನಿವೇದಿಸುವುದಷ್ಟೇ ಅಲ್ಲ, ತಮ್ಮ ಆತ್ಮವನ್ನೇ ಅವನಿಗೆ ಅರ್ಪಿಸಿದರು. ಆ ಮೂಲಕ ಅವನನ್ನು ಸ್ವಂತವಾಗಿಸಿಕೊಂಡರು. ಯಕಶ್ಚಿತ್ ಹಾಲನ್ನು ಕೊಟ್ಟು, ಅವನನ್ನು ಸ್ವಂತವಾಗಿಸಿಕೊಳ್ಳಬಹುದು ಎಂತಾದರೆ ಅವನೆಷ್ಟು ಹತ್ತಿರ ಮತ್ತು ಎತ್ತರ!
ಒಬ್ಬೊಬ್ಬರನ್ನು ತೃಪ್ತಿಪಡಿಸಲು ಒಂದೊಂದು ವಿಧಾನ ಇದೆಯಂತೆ,
ಶ್ರದ್ಧೆಯಿಂದ ಮಾಡುವ ನಮಸ್ಕಾರಕ್ಕೆ ಸೂರ್ಯ, ಭಕ್ತಿಯಿಂದ ಮಾಡುವ ಅಭಿಷೇಕದಿಂದ ಶಿವ, ತನ್ಮಯವಾಗಿ ಮಾಡುವ ಅಲಂಕಾರದಿಂದ ವಿಷ್ಣು ತೃಪ್ತಿ ಹೊಂದಿದ ಹಾಗೆ, ಅವನು ಹಾಲು ಮೊಸರಿನ ನೈವೇದ್ಯದಿಂದ ತೃಪ್ತಿ ಹೊಂದುತ್ತಾನೆ, ತೃಪ್ತಿ ಹೊಂದಿ ಕೇಳಿದ ವರ ಕೊಡುವುದಷ್ಟೇ ಅಲ್ಲ, ಬದಲಾಗಿ ತನ್ನನ್ನೇ ಕೊಟ್ಟುಕೊಳ್ಳುತ್ತಾನೆ.
ಇಲ್ಲಿ ಬಳಸಿದ ಪದ, ಕೇವಲ ಪ್ರಾಸಕ್ಕೆ ಹೊಂದುವ ಕಾರಣಕ್ಕಾಗಿ ಬಳಸಿದ ಹಾಗೆ ಅನಿಸುವುದಿಲ್ಲ, ಸಖಿ, ಕಮಲಮುಖಿ, ಇಂದುಮುಖಿ ಇವೆಲ್ಲ ಸ್ತ್ರೀಮುಖದ ವರ್ಣನೆಯ ಪದಗಳು, ಸರಿ. ಆದರೆ ಕೊನೆಗೆ ಬರುವ “ಸೌಮ್ಯಮುಖಿ” ಎಂಬುದು ಅವಳ ಮುಖದ ವರ್ಣನೆಯಷ್ಟೇ ಎಂದು ನನಗನಿಸುವುದೇ ಇಲ್ಲ. ಎಲ್ಲಾ ಆಸೆ, ಮೋಹ, ಬಯಕೆಗಳಿಗಿಂತಲೂ ಅವನೇ ಮುಖ್ಯ ಎಂತಾದ ಮೇಲೆ, ಅವನೇ ಸಿಕ್ಕಿದ್ದಾನೆ ಎಂತಾದ ಮೇಲೆ ದೊರೆಯುವ ಸಾರ್ಥಕತೆ ಇದೆಯಲ್ಲ, ಆಗ ಮನಸ್ಸು ಶಾಂತವಾಗಿ, ಮುಖ ಸೌಮ್ಯವಾಗುತ್ತದೆ. ತೃಪ್ತಿ ಕಾಣಿಸುತ್ತದೆ. ಜ್ಞಾನಿಗಳ ಮುಖದಲ್ಲಿ ಕಾಣುವ ವರ್ಚಸ್ಸಿನಂತೆ. ಹಾಗಾಗಿಯೇ ಈ ಕವಿತೆಯ ಪ್ರತಿಪದವೂ ಬರೆದಿಟ್ಟದ್ದಷ್ಟೇ ಅಲ್ಲ, ಕೊರೆದಿಟ್ಟದ್ದು. ಬರೆದಿದ್ದನ್ನು ಅಳಿಸಿ ವ್ಯತ್ಯಾಸ ಮಾಡಲು ಸಾಧ್ಯವಿದೆ. ಕೊರೆದಿದ್ದನ್ನು ಅಳಿಸಿ, ಮತ್ತೇನೋ ಮಾಡಹೋದರೆ ಆ ಶಿಲ್ಪ ಮುರಿದುಹೋಗುತ್ತದೆ. ಇಲ್ಲಿ ಯಾವ ಪದವನ್ನು ತೆಗೆದರೂ, ಬೇರೆಯದನ್ನು ಇಟ್ಟರೂ ಕವಿತೆ ಈ ಭಾವದಲ್ಲಿ ಉಳಿಯುವುದಿಲ್ಲ.
ಇಂತಹ ನಮ್ಮ ಲಾಭವನ್ನು ಮೀರುವ ಲಾಭ ಬೇರೆ ಎಲ್ಲಾದರೂ ಇದೆಯೇ? ಇಂತಹ ಲಾಭ ಸಿಗಲು ಸಾಧ್ಯವೇ? ಹಾಗಾಗಿ, ಬೇಗ ಬಾ, “ಬೃಂದಾವನಕೆ ಹಾಲನು ಮಾರಲು….”
ಹೊರಡುವುದು ಲಾಭದ ಆಸೆಯಿಂದಲೇ, ವ್ಯಾವಹಾರಿಕ ದೃಷ್ಟಿಯಿಂದಲೇ, ಅವನನ್ನು ಕಾಣುವತನಕ ಮಾತ್ರ, ಕಂಡಮೇಲೆ ಆ ಕತ್ತಲ ಜಗತ್ತು ಮರೆಯಾಗಿ ದಿವ್ಯಜ್ಞಾನದ ಪ್ರಭೆ ಗೋಚರಿಸುತ್ತದೆ. ಅವನು ಸ್ವಂತವಾಗುತ್ತಾನೆ. ನಮ್ಮತನವನ್ನು ನಿವಾರಿಸಿ, ಅವನೊಳಗನ್ನು ತುಂಬುತ್ತಾನೆ. ನಾವೇ ಅವನಾದ ಮೇಲೆ, ಅವನೇ ನಮ್ಮೊಳಗನ್ನು ಆವರಿಸಿದ ಮೇಲೆ ಉಳಿಯುವುದೇನು? ಮುಕ್ತಿ.
ಇದನ್ನು ನಮ್ಮತನಕ್ಕೊಮ್ಮೆ ಅನ್ವಯಿಸಿಕೊಂಡೆ. ನಮ್ಮೊಳಗಿರುವುದೆಲ್ಲವೂ ಆಸೆಗಳೇ, ಬಯಕೆಗಳೇ. ಹಣ, ಅಧಿಕಾರ, ಕುಟುಂಬ ಇವುಗಳ ಜೊತೆಗೆ ನೂರಾರು ಬಯಕೆಗಳು. ಒಂದುಹಮತದಲ್ಲಿಎಲ್ಲವೂ ಸಹಜ ಅನಿಸುವ ಆಸೆಗಳು. ಆದರೆ ಎಲ್ಲದಕ್ಕಿಂತಲೂ ಮನ್ನಣೆಯ ದಾಹ ಎಂಬುದೊಂದು ಇದೆಯಲ್ಲ, ಅದನು ಸುಲಭದ್ದಲ್ಲ.
ಇದೆಲ್ಲವನ್ನೂ ಈಡೇರಿಸಿಕೊಳ್ಳುವ ಧಾವಂತದಲ್ಲಿ ಸುಲಭವಾಗಿ ಸಿಗುವ, ಸಿಕ್ಕಿದ ಮೇಲೆ ಸಂಪೂರ್ಣ ನೆಮ್ಮದಿ ಕೊಡುವ “ಅವನು” ನಮಗೆ ನೆನಪಾಗುವುದೇ ಇಲ್ಲ. ಒಂದು ವೇಳೆ ನೆನಪಾಗಿ ಅವನ ಬಳಿ ಹೋದರೂ, ಅಲ್ಲಿ ಮತ್ತದೇ ಬೇಡಿಕೆಗಳು. ಸಮರ್ಪಣೆಯ ಮೂಲಕ ಸಮಸ್ತವನ್ನು ಪಡೆಯುವ ಸಾಧ್ಯತೆಯಿದ್ದರೂ ಆ ದಾರಿಯತ್ತ ನಾವು ಹೊರಳುವುದೇ ಇಲ್ಲ.
ಇರಲಿ, ಬೃಂದಾವನಕ್ಕೆ ಹಾಲನು “ಮಾರಲು” ಹೋಗಿ, ಅದರ ಬದಲಾಗಿ ನೈವೇದ್ಯ ಮಾಡುವ, ತನ್ಮೂಲಕ ಅವನನ್ನು ಸ್ವಂತವಾಗಿಸಿಕೊಳ್ಳುವ ಈ ಗೀತೆ ಎಷ್ಟು ಅದ್ಭುತವಲ್ಲವೇ? ಇಂತಹ ಅದ್ಭುತ ಗೀತೆಯನ್ನು ಬರೆದ ಕುವೆಂಪು ಸುಮ್ಮನೆ “ರಸ ಋಷಿ” ಎಂಬ ಅಭಿದಾನಕ್ಕೆ ಪಾತ್ರವದದ್ದಲ್ಲ, ನಿಜವಾಗಿಯೂ ಅವರು ಋಷಿ, ಅರ್ಥವಾದವರಿಗೆ ಮಾತ್ರ.
ಒಮ್ಮೆ ಮನೆಯಲ್ಲಿ ತಯಾರಾಗುವ ಆ ಇಬ್ಬರು ಸಖಿಯರು, ಅವರ ಹಾಲಿನಮಡಕೆ, ಅವರ ಅಲಂಕಾರ, ಆ ಯಮುನಾ ತೀರ, ಅಲ್ಲಿ ಕೊಳಲೂದುವ ಗೋಪಾಲ….. ಇವರನ್ನು ಕಲ್ಪಿಸಿಕೊಳ್ಳಿ. ಮುಂದಿನದು ಬೇಡವೆಂದರೂ ಎದೆಗಿಳಿಯುತ್ತದೆ.
ನಾ ಹೊರಟೆ….
ಬೃಂದಾವನಕೆ ಹಾಲನು ಮಾರಲು……
ಬರುವಿರಾ ಸಖಿಯರೇ?!
ಮೇದಿನಿ ಕೆಸವಿನಮನೆ
