- ಎನ್. ವಿಶ್ವನಾಥ್ ಕಾಮತ್, ಚಿಂತಕ, ಲೇಖಕ
ಪ್ರಧಾನಿ ನರೇಂದ್ರ ಮೋದಿಯವರು 2026ರ ಮಾರ್ಚ್ 22ರಂದು ತಮ್ಮ ರಾಜಕೀಯ ಜೀವನದ 8,931 ದಿನಗಳ ದೀರ್ಘ ಸೇವೆಯನ್ನು ಸರ್ವೋಚ್ಚ ಪದವಿಗಳಲ್ಲಿ (ಮುಖ್ಯಮಂತ್ರಿ, ಪ್ರಧಾನಮಂತ್ರಿ) ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ. ಸಿಕ್ಕಿಂ ಮುಖ್ಯಮಂತ್ರಿಯಾಗಿದ್ದ ಪವನ್ ಕುಮಾರ್ ಚಾಮ್ ಲಿಂಗ್ ಅವರ ಈವರೆಗಿನ ದಾಖಲಿತ 8,930 ದಿನಗಳ ದಾಖಲೆಯನ್ನು ಮೋದಿಯವರು ಹಿಂದಿಕ್ಕಿದ್ದಾರೆ.
1994ರಿಂದ 2019ರವರೆಗೆ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಚಾಮ್ ಲಿಂಗ್ 8,930 ದಿನಗಳ ಸೇವೆಯನ್ನು ದಾಖಲಿಸಿದ್ದರು. ಪ್ರಧಾನಿ ಮೋದಿಯವರು 25 ಜುಲೈ 2025 ರಂದು ಅನುಸ್ಯೂತವಾಗಿ 4,078 ದಿನಗಳ ಕಾಲ ತಡೆಯಿಲ್ಲದೇ ಪ್ರಧಾನಿಪಟ್ಟದಲ್ಲಿ ಮುಂದುವರಿದು ದಾಖಲೆಯನ್ನು ನಿರ್ಮಿಸಿ, ಇದುವರೆಗೆ ಶ್ರೀಮತಿ ಇಂದಿರಾ ಗಾಂಧಿಯವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದರು. ಇದೇ ಮಾರ್ಚ್ 22ಕ್ಕೆ ಮೋದಿಯವರು ಪ್ರಧಾನಿಯಾಗಿ 4,318 ದಿನಗಳನ್ನು ಪೂರೈಸಿದರು.
ಅದಕ್ಕಿಂತ ಮುಂಚೆ ಅವರು ಗುಜರಾತ್ ಮುಖ್ಯಮಂತ್ರಿಯಾಗಿ 4,613 ದಿನಗಳಷ್ಟು ಕಾಲ ಅಧಿಕಾರದಲ್ಲಿದ್ದರು. 6,130 ದಿನಗಳಷ್ಟು ಸಮಯ ದೇಶದ ಪ್ರಧಾನಿಯಾಗಿ ದಾಖಲೆ ನಿರ್ಮಿಸಿದ್ದ ಜವಾಹರ ಲಾಲ್ ನೆಹರು (15 ಆಗಸ್ಟ್ 1947 – 27 ಮೇ 1964) ಅವರು ಮೊದಲ ಸ್ಥಾನದಲ್ಲಿದ್ದರೆ, ಮೋದಿಯವರು ಎರಡನೇ ಸ್ಥಾನದಲ್ಲಿದ್ದಾರೆ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇಂತಹ ದಾಖಲೆ ಕೆಲವೇ ಕೆಲವು ವ್ಯಕ್ತಿಗಳ ಹೆಸರಲ್ಲಿದೆ.
ಭಾರತದ ಮಟ್ಟಿಗೆ ಈ ದಾಖಲೆ ಐತಿಹಾಸಿಕ ಎನ್ನುವುದಕ್ಕೆ ಕೆಲವು ಕಾರಣಗಳಿವೆ. ಮೊದಲನೆಯದಾಗಿ ಭಾರತವು ಪ್ರಪಂಚದ ಅತ್ಯಂತ ಜನನಿಬಿಡ ರಾಷ್ಟ್ರ. ಜನಸಂಖ್ಯೆಯಲ್ಲಿ ಅದು ಪ್ರಥಮ ಮಾತ್ರವಲ್ಲ, ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ಆರನೇ ಒಂದರಷ್ಟು ಈ ದೇಶದಲ್ಲಿ ವಾಸಿಸುತ್ತಿದ್ದಾರೆ. ಹೀಗಿದ್ದರೂ ಅದು ಪ್ರಪಂಚದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೆಸರು ಗಳಿಸಿದೆ. ಇಲ್ಲಿ ಜನರಿಂದ ಆಯ್ಕೆಯಾದರೆ ಮಾತ್ರ ಅಧಿಕಾರ ಸಿಗುತ್ತದೆ. ಅಂತಹ ಸಮಯದಲ್ಲಿ ಓರ್ವ ವ್ಯಕ್ತಿ ಜನರ ಪ್ರೀತಿಯನ್ನು ಗಳಿಸಿ ಇಷ್ಟು ಕಾಲ ಅಧಿಕಾರ ನಡೆಸುವುದು ತಮಾಷೆಯ ವಿಚಾರವಲ್ಲ. ಉಳಿದ ಕೆಲವು ರಾಷ್ಟ್ರಗಳಲ್ಲಿ ಇಂತಹ ಕೆಲವು ದಾಖಲೆಗಳು ಇರಬಹುದಾದರೂ, ಆ ರಾಷ್ಟ್ರಗಳಲ್ಲಿ ನಿರಂಕುಶ ಪ್ರಭುತ್ವ ಇದ್ದು, ಅವು ಜನರ ಆಯ್ಕೆಯಿಂದ ಆದ ದಾಖಲೆಗಳಿಲ್ಲ.
2014, 2019 ಹಾಗೂ ಆನಂತರದ ಸತತ ಚುನಾವಣೆಗಳಲ್ಲಿ ಪ್ರಚಂಡ ಬಹುಮತದೊಂದಿಗೆ ಅವರು ಮರು ಆಯ್ಕೆಯಾಗಿರುವುದು ಭಾರತೀಯರ ಅಚಲ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದ ಹೆಗ್ಗಳಿಕೆಯೂ ಅವರ ಜನಪ್ರಿಯತೆ ಹಾಗೂ ಪ್ರಜಾಪ್ರಭುತ್ವದ ಮೇಲಿನ ಅವರ ನಿಷ್ಠೆಯನ್ನು, ಜನರ ಜೊತೆಗಿನ ನಿಕಟ ಸಂಪರ್ಕವನ್ನು ಸಾಬೀತುಪಡಿಸುತ್ತದೆ.
ಇನ್ನೊಂದು ಗಮನ ಸೆಳೆಯುವ ಅಂಶ ಎಂದರೆ ಮೋದಿ ಅವರು ದೇಶದಲ್ಲಿ ಮಾತ್ರ ತನ್ನ ಪ್ರಭಾವ ಉಂಟುಮಾಡಿದ್ದಲ್ಲ, ಪ್ರಪಂಚದ ಎಲ್ಲಾ ದೇಶಗಳ ಮುಖಂಡರ ವಿಶ್ವಾಸವನ್ನು ಕೂಡ ಗಳಿಸಿದ್ದಾರೆ. ಓರ್ವ ಸಾಮಾನ್ಯ ಚಹಾ ಮಾರುವ ವೃತ್ತಿಯಿಂದ ಮೇಲೆ ಬಂದು, ಆರ್ಎಸ್ಎಸ್ ಸಂಘಟನೆಯ ಮೂಲಕ ಶಿಸ್ತನ್ನು ಮೈಗೂಡಿಸಿಕೊಂಡು, ದೇಶದಲ್ಲಿ ಎಲ್ಲೆಡೆ ಪ್ರವಾಸ ಮಾಡಿ, ಜನರ ನಿಸ್ವಾರ್ಥ ಸೇವೆಯನ್ನು ಮಾಡುತ್ತ ಓರ್ವ ದಾರ್ಶನಿಕನ ಸ್ಥಿತಿಯನ್ನು ತಲುಪಿದ ಇವರು ದೇಶಕ್ಕೊಂದು ಹೆಮ್ಮೆ.
ಇವರ ‘ನೇಷನ್ ಫಸ್ಟ್’ ಬಹಳ ಪ್ರಭಾವಕಾರಿ ನುಡಿಗಟ್ಟಾಗಿ ಉಳಿದಿದೆ. ಒಂದು ದಶಕದಲ್ಲಿ ವಿಶ್ವದಲ್ಲಿ ಭಾರತವು ತಲೆ ಎತ್ತಿ ನಿಂತು ಉಳಿದ ರಾಷ್ಟ್ರಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಅವರ ಸಾಧನೆಯ ಬಗ್ಗೆ ಈಗಾಗಲೇ ಅನೇಕ ಲೇಖನಗಳು ಬಂದಿದ್ದು, ಏನು ಬರೆದರೂ ಅದು ಚರ್ವಿತಚರ್ವಣ ಆಗುತ್ತದೆ. ಹಾಗಾಗಿ ಈ ಲೇಖನವನ್ನು ಕೆಲವು ಅಂಶಗಳಿಗೆ ಮಾತ್ರ ಸೀಮಿತ ಮಾಡುವುದು ಒಳಿತು ಎಂದು ಭಾವಿಸಲಾಗಿದೆ.
ಇದೇ ಸಂದರ್ಭದಲ್ಲಿ ಭಾರತವು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಮರುಸ್ಥಾಪಿಸುವಲ್ಲಿ ಮೋದಿಯವರ ಪಾತ್ರವನ್ನು ಸ್ಮರಿಸಲೇಬೇಕು. ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ, ಆಯುರ್ವೇದದ ಪ್ರಸಾರ ಹಾಗೂ ಕಳುವಾಗಿದ್ದ ಭಾರತದ ನೂರಾರು ಪುರಾತನ ಮೂರ್ತಿಗಳನ್ನು ವಿದೇಶಗಳಿಂದ ಮರಳಿ ತಾಯ್ನಾಡಿಗೆ ತಂದಿರುವುದು ಅವರ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯ ದ್ಯೋತಕವಾಗಿದೆ.
ನೇತೃತ್ವ
ಒಂದು ರಾಷ್ಟ್ರವನ್ನು ಮುನ್ನಡೆಸುವವನು ದಾರ್ಶನಿಕನಾಗಿ ಪರಿವರ್ತನೆ ಆಗಬೇಕು ಅಥವಾ ಓರ್ವ ದಾರ್ಶನಿಕನೇ ದೇಶದ ನಾಯಕತ್ವ ವಹಿಸಬೇಕು. ಹಾಗಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎನ್ನುವ ಪ್ರಪಂಚದ ತತ್ತ್ವಜ್ಞಾನಿಯೋರ್ವರ ಉಕ್ತಿ ನೆನಪಿಗೆ ಬರುತ್ತದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ “ಸಂಭವಾಮಿ ಯುಗೇ ಯುಗೇ” ಎಂಬ ಮಾತನ್ನು ನೆನಪಿಸಿಕೊಳ್ಳಬಹುದು. ಒಂದು ದಶಕದ ಹಿಂದೆ ನಮ್ಮ ದೇಶದ ಬಗ್ಗೆ ಮೂಗು ಮುರಿಯುತ್ತಿದ್ದವರು ಕೂಡ ಹೆಮ್ಮೆ ಪಡುವಂತೆ ಮಾಡಿದ ಮೋದಿಯವರ ಬಗ್ಗೆ ಶ್ರೀಕೃಷ್ಣನ ಮೇಲಿನ ನುಡಿಯನ್ನು ಅನ್ವಯಿಸಿದರೆ ಅದು ಅತಿಶಯೋಕ್ತಿ ಆಗಲಿಕ್ಕಿಲ್ಲ. ಕಾರಣ “ಸಂವಿಧಾನದ 370ನೇ ವಿಧಿಯ ರದ್ದು, ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಕ್, ಏಕರೂಪ ತೆರಿಗೆ, ಸೈನಿಕರ ಪಿಂಚಣಿಯಲ್ಲಿ ಸುಧಾರಣೆ, ದೇಶದ ಅರ್ಥವ್ಯವಸ್ಥೆ, ರಕ್ಷಣಾ ವ್ಯವಸ್ಥೆ, ಆರೋಗ್ಯ ವ್ಯವಸ್ಥೆಗಳಲ್ಲಿ ಸುಧಾರಣೆ, ವೈರಿಗಳನ್ನು ಅವರ ಮನೆಗೆ ನುಗ್ಗಿ ಹೊಡೆಯುವ ಸಾಹಸ, ಮಹಿಳೆಯರಿಗೆ ಮೀಸಲು…” ಒಂದೇ ಎರಡೇ? ಅಸಾಧ್ಯವೆನಿಸಿಕೊಂಡಿದ್ದ ಅನೇಕ ಸುಧಾರಣೆಗಳನ್ನು ಮೋದಿ ತಂದಿದ್ದಾರೆ. ಆತಂಕವಾದಿಗಳು, ಉಗ್ರರು ಮತ್ತು ನಕ್ಸಲ್ಗಳನ್ನು ಮಟ್ಟ ಹಾಕಿರುವುದು ಅತಿದೊಡ್ಡ ಸಾಧನೆ.
ಕೇವಲ ಭದ್ರತೆ ಮತ್ತು ಆರ್ಥಿಕತೆ ಮಾತ್ರವಲ್ಲದೆ, ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿಯೂ ಅವರ ನೇತೃತ್ವದಲ್ಲಿ ಭಾರತ ದಾಪುಗಾಲು ಹಾಕಿದೆ. ‘ಚಂದ್ರಯಾನ-3’ರ ಯಶಸ್ವಿ ಉಡಾವಣೆ ಹಾಗೂ ಚಂದ್ರನ ದಕ್ಷಿಣ ಧ್ರುವದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ್ದು, ಮತ್ತು ‘ಆದಿತ್ಯ ಎಲ್-1’ ಯೋಜನೆ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತು. ಕೋವಿಡ್- 19 ಮಹಾಮಾರಿಯ ಸಮಯದಲ್ಲಿ ಸ್ವದೇಶಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ‘ವ್ಯಾಕ್ಸಿನ್ ಮೈತ್ರಿ’ಯ ಮೂಲಕ ವಿತರಿಸಿದ್ದು ಅವರ ಮಾನವೀಯ ನಾಯಕತ್ವಕ್ಕೆ ಕನ್ನಡಿಯಾಗಿದೆ.
ಅವರ ಕೆಲವು ಕಾರ್ಯಕ್ರಮಗಳ ಹೆಸರುಗಳು ಕೂಡ ಕಾರ್ಯಕ್ರಮಗಳಷ್ಟೇ ಆಕರ್ಷಕ. “ಬೇಟಿ ಬಚಾವೋ – ಬೇಟಿ ಪಢಾವೋ, ಜನಧನ್, ಆಧಾರ್, ಮೊಬೈಲ್ (JAM), ನಮಾಮಿ ಗಂಗೇ, ಪರ್ ಡ್ರಾಪ್ ಮೋರ್ ಕ್ರಾಪ್, ಇಂಡಿಯಾ ಫಸ್ಟ್, ಆತ್ಮನಿರ್ಭರ ಭಾರತ್” ಹೀಗೆ ಅನೇಕ ಜನಹಿತದ ಕಾರ್ಯಕ್ರಮಗಳು ಅವರಿಂದ ನಡೆಯುತ್ತಿವೆ. ಬಹಳ ದಶಕಗಳ ನಂತರ ದೇಶದ ಜನಮನದಲ್ಲಿ ಒಂದು ಆತ್ಮವಿಶ್ವಾಸವನ್ನು ಉಂಟುಮಾಡುವಲ್ಲಿ ಮೋದಿಯವರು ಸಫಲರಾಗಿದ್ದಾರೆ ಎಂದರೆ ತಪ್ಪಿಲ್ಲ.
‘ಡಿಜಿಟಲ್ ಇಂಡಿಯಾ’ದ ಕನಸಿನ ಕೂಸಾದ ಯುಪಿಐ (UPI) ವ್ಯವಸ್ಥೆಯು ಇಂದು ಜಾಗತಿಕ ಮಟ್ಟದಲ್ಲಿ ಕ್ರಾಂತಿಯನ್ನುಂಟುಮಾಡಿದೆ. ಹಳ್ಳಿಯ ಸಣ್ಣ ವ್ಯಾಪಾರಿಯಿಂದ ಹಿಡಿದು ಮಹಾನಗರಗಳ ಮಾಲ್ಗಳವರೆಗೆ ನಡೆಯುತ್ತಿರುವ ನಗದುರಹಿತ ವಹಿವಾಟು, ಭಾರತೀಯರ ತಂತ್ರಜ್ಞಾನ ಅಳವಡಿಕೆಯ ವೇಗವನ್ನು ಜಗತ್ತಿಗೆ ಪರಿಚಯಿಸಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿನ ‘ಗತಿ ಶಕ್ತಿ’ ಯೋಜನೆಯು ದೇಶದ ಮೂಲಸೌಕರ್ಯ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸುತ್ತಿದೆ.




ಪ್ರಪಂಚ ಆಲಿಸುತ್ತದೆ
“ವಸುಧೈವ ಕುಟುಂಬಕಮ್” ಆಧರಿಸಿ ಮೋದಿಯವರು ಜಿ20 ಶೃಂಗದಲ್ಲಿ ನೀಡಿದ “ಪ್ರಪಂಚವೇ ನಮ್ಮ ಕುಟುಂಬ” ಎನ್ನುವ ಉಕ್ತಿಯನ್ನು ಪ್ರಪಂಚ ಗಂಭೀರವಾಗಿ ತೆಗೆದುಕೊಂಡಿದೆ. ಅವರು ಬಹುತೇಕ ಎಲ್ಲಾ ರಾಷ್ಟ್ರಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಸತ್ಯನಿಷ್ಠೆಯೊಂದಿಗಿನ ಅವರ ಸರಳ, ಪ್ರೇಮಪೂರ್ವಕ ಭಾವನೆಗಳನ್ನು ಪ್ರಪಂಚ ಅರ್ಥ ಮಾಡಿಕೊಂಡಿದೆ. ಅವರಲ್ಲಿ “ಮಧು ತಿಷ್ಟತಿ ಜಿವ್ಹಾಗ್ರೇ ಹೃದಯೇ ತು ಹಾಲಾಹಲಂ” ಎನ್ನುವಂತಹ ದ್ವಿಮುಖ ನೀತಿ ಇಲ್ಲ. ಪಾರದರ್ಶಕ ವ್ಯಕ್ತಿತ್ವ. ಹಾಗಾಗಿ ಈವರೆಗೆ ಅವರು ಅತೀ ಹೆಚ್ಚು ರಾಷ್ಟ್ರಗಳ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
‘ಗ್ಲೋಬಲ್ ಸೌತ್’ (Global South) ಅಥವಾ ಜಗತ್ತಿನ ಅಭಿವೃದ್ಧಿಶೀಲ ಹಾಗೂ ಹಿಂದುಳಿದ ರಾಷ್ಟ್ರಗಳ ಧ್ವನಿಯಾಗಿ ಮೋದಿಯವರು ಇಂದು ಹೊರಹೊಮ್ಮಿದ್ದಾರೆ. ಆಫ್ರಿಕನ್ ಯೂನಿಯನ್ ಅನ್ನು ಜಿ-20 ಒಕ್ಕೂಟಕ್ಕೆ ಸೇರಿಸುವಲ್ಲಿ ಅವರ ಪಾತ್ರ ಐತಿಹಾಸಿಕವಾದದ್ದು. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ‘ಲೈಫ್’ (LiFE – Lifestyle for Environment) ಎಂಬ ಮಂತ್ರವನ್ನು ಜಗತ್ತಿಗೆ ನೀಡಿದ್ದು ಅವರ ಪರಿಸರ ಕಾಳಜಿಯನ್ನು ಹಾಗೂ ಜಾಗತಿಕ ನಾಯಕತ್ವವನ್ನು ಎತ್ತಿತೋರಿಸುತ್ತದೆ.
ವಿಶ್ವ ಸಂಧಾನಕಾರ
ಉಗ್ರಪೋಷಕ ಆತಂಕವಾದಿ ರಾಷ್ಟ್ರ ಪಾಕಿಸ್ತಾನವನ್ನು ಬಿಟ್ಟರೆ ಮೋದಿಯವರು ಯಾವುದೇ ರಾಷ್ಟ್ರಕ್ಕೆ ಅಜಾತಶತ್ರು ಎಂದೇ ಹೇಳಬಹುದು. ಯಾರಿಗೂ ಕೇಡು ಬಯಸದ ಅವರಿಂದ ರಾಷ್ಟ್ರ ರಾಷ್ಟ್ರಗಳ ನಡುವಿನ ಸಮಸ್ಯೆಗಳ ಪರಿಹಾರಗಳನ್ನು ಜನರು ಬಯಸುತ್ತಾರೆ.
ರಷ್ಯಾ-ಉಕ್ರೇನ್ ಯುದ್ಧದಂತಹ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ “ಇದು ಯುದ್ಧದ ಯುಗವಲ್ಲ” (This is not an era of war) ಎಂದು ನೇರವಾಗಿ ಹೇಳುವ ಮೂಲಕ ಶಾಂತಿಯ ಸಂದೇಶವನ್ನು ಸಾರಿದರು. ಪ್ರಪಂಚದ ಯಾವುದೇ ಮೂಲೆಯಲ್ಲಿ ಬಿಕ್ಕಟ್ಟು ಎದುರಾದರೂ, ಆಯಾ ದೇಶಗಳ ನಾಯಕರು ಭಾರತದ ಹಸ್ತಕ್ಷೇಪ ಮತ್ತು ಮೋದಿಯವರ ಸಲಹೆಯನ್ನು ನಿರೀಕ್ಷಿಸುವ ಹಂತಕ್ಕೆ ಭಾರತದ ರಾಜತಾಂತ್ರಿಕ ಶಕ್ತಿ ಬೆಳೆದಿದೆ. ಭಾರತದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಅವರು ನೀಡುತ್ತಿರುವ ಒತ್ತು ಅನನ್ಯ.
ಒಟ್ಟಾರೆಯಾಗಿ, 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಅಂದರೆ ‘ವಿಕಸಿತ ಭಾರತ’ (Viksit Bharat) ವನ್ನಾಗಿ ರೂಪಿಸುವ ಅವರ ದೂರದೃಷ್ಟಿ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಸಮಗ್ರ ಚಿಂತನೆ ಮತ್ತು ಅವಿರತ ಶ್ರಮ ಮುಂದಿನ ಪೀಳಿಗೆಗಳಿಗೆ ಸುಭದ್ರ ಬುನಾದಿಯನ್ನು ಹಾಕಿಕೊಡುತ್ತಿದೆ. ಅವರ ಈ ಸುದೀರ್ಘ ರಾಜಕೀಯ ಪಯಣ ಕೇವಲ ಅಂಕಿ-ಅಂಶಗಳ ದಾಖಲೆಯಾಗಿರದೆ, ಹೊಸ ಭಾರತದ ಉದಯದ ಶಾಸನವಾಗಿ ರೂಪುಗೊಂಡಿದೆ.
ಅಂತಾರಾಷ್ಟ್ರೀಯ ದಾಖಲೆಗಳು
ಇಂದಿನವರೆಗೆ 18 ದೇಶಗಳಲ್ಲಿ 19 ಬಾರಿ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ (ಅಮೆರಿಕದಲ್ಲಿ ಎರಡು ಬಾರಿ). ಹಿಂದಿನ ಪ್ರಧಾನಿಗಳಾಗಿದ್ದ ನೆಹರು ಮೂರು ಬಾರಿ, ಇಂದಿರಾಗಾಂಧಿಯವರು ನಾಲ್ಕು ಬಾರಿ, ರಾಜೀವ ಗಾಂಧಿಯವರು ಎರಡು ಬಾರಿ, ನರಸಿಂಹ ರಾವ್ ಅವರು ಒಂದು ಬಾರಿ ಹಾಗೂ ಮನಮೋಹನ್ ಸಿಂಗ್ ಅವರು ಏಳು ಬಾರಿ ವಿದೇಶೀ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಗಳಾದ ವಾಜಪೇಯಿ ಎರಡು ಬಾರಿ ಮತ್ತು ಮೊರಾರ್ಜಿ ದೇಸಾಯಿ ಅವರು ಒಂದು ಬಾರಿ ವಿದೇಶೀ ಸಂಸತ್ತಿನಲ್ಲಿ ತಮ್ಮ ಭಾಷಣವನ್ನು ಮಾಡಿದ್ದರು.
ಆಸ್ಟ್ರೇಲಿಯಾ (2014), ಫಿಜಿ (2014), ಭೂತಾನ್ (2014), ನೇಪಾಳ (2014), ಮಂಗೋಲಿಯಾ (2015), ಮಾರಿಷಸ್ (2015), ಅಫ್ಘಾನಿಸ್ತಾನ್ (2015), ಯುನೈಟೆಡ್ ಕಿಂಗ್ಡಮ್ (2015), ಶ್ರೀಲಂಕಾ (2015), ಉಗಾಂಡಾ (2018), ಮಾಲ್ಡೀವ್ಸ್ (2019), ಗಯಾನಾ (2024), ಇಥಿಯೋಪಿಯಾ (2025), ನಮೀಬಿಯಾ (2025), ಟ್ರಿನಿಡಾಡ್ ಮತ್ತು ಟೋಬೆಗೋ (2025), ಘಾನಾ (2025), ಇಸ್ರೇಲ್ (2026) ಅಲ್ಲದೇ ಅಮೆರಿಕದ ಸಂಸತ್ತನ್ನು ಉದ್ದೇಶಿಸಿ 2016 ಮತ್ತು 2023ರಲ್ಲಿ ಎರಡು ಬಾರಿ ಮಾತನಾಡಿದ್ದಾರೆ.
ಬೇರೆ ಬೇರೆ ರಾಷ್ಟ್ರಗಳು ಸುಮಾರು ಅವರಿಗೆ ತಮ್ಮ ರಾಷ್ಟ್ರದ 30 ಅತ್ಯುನ್ನತ ನಾಗರಿಕ ಪುರಸ್ಕಾರಗಳನ್ನು ಪ್ರದಾನ ಮಾಡಿವೆ. ಯಾವುದೇ ಭಾರತೀಯ ನಾಯಕನಿಗೆ ಸಿಕ್ಕದಷ್ಟು ಪುರಸ್ಕಾರಗಳು ಮೋದಿ ಅವರಿಗೆ ಸಿಕ್ಕಿವೆ. 2024ರಲ್ಲಿ 6, 2025ರಲ್ಲಿ 4 ಪುರಸ್ಕಾರಗಳು ಅವರಿಗೆ ಕೊಡಲ್ಪಟ್ಟಿವೆ. ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ ಮತ್ತು ಮನಮೋಹನಸಿಂಗ್ ಅವರಿಗೆ ತಲಾ ಎರಡು ವಿದೇಶೀ ನಾಗರಿಕ ಗೌರವಗಳನ್ನು ಕೊಡಲಾಗಿತ್ತು.
ಏಷ್ಯಾದ ರಾಷ್ಟ್ರಗಳು
● ಸೌದಿ ಅರೇಬಿಯಾ (2016): ಆರ್ಡರ್ ಆಫ್ ಕಿಂಗ್ ಅಬ್ದುಲ್ ಅಝೀಜ್ (SASH)
● ಯುನೈಟೆಡ್ ಅರಬ್ ಎಮಿರೇಟ್ಸ್ (2019): ಆರ್ಡರ್ ಆಫ್ ಝಯೇದ್
● ಭೂತಾನ್ (2021, 2024): ಆರ್ಡರ್ ಆಫ್ ಡ್ರಕ್ ಗ್ಯಾಲಪೋ
● ಶ್ರೀಲಂಕಾ (2025): ಶ್ರೀಲಂಕಾ ಮಿತ್ರ ವಿಭೂಷಣ
ಆಫ್ರಿಕಾದ ರಾಷ್ಟ್ರಗಳು
● ಈಜಿಪ್ಟ್ (2023): ಆರ್ಡರ್ ಆಫ್ ನೈಲ್
● ಘಾನಾ (2025): ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ
● ನಮೀಬಿಯಾ (2025): ಆರ್ಡರ್ ಆಫ್ ದಿ ಮೋಸ್ಟ್ ಏನ್ಶಿಯೆಂಟ್ ವೆಲ್ವಿಟ್ಷೆಯಾ ಮೀರಾಬಿಲೀಸ್ (Order of the Most Ancient Welwitschia Mirabilis)
● ಇಥಿಯೋಪಿಯಾ (2025): ಗ್ರೇಟ್ ಹಾನರ್ ನಿಶಾನ್ ಆಫ್ ಇಥಿಯೋಪಿಯಾ
ಯುರೋಪ್ ರಾಷ್ಟ್ರಗಳು
● ಫ್ರಾನ್ಸ್ (2023): ಗ್ರಾಂಡ್ ಕ್ರಾಸ್ ಆಫ್ ದಿ ಲೇಜಿಯನ್ ಆಫ್ ಹಾನರ್
● ಗ್ರೀಸ್ (2023) ಗ್ರಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್
● ರಷ್ಯಾ (2024): ಆರ್ಡರ್ ಆಫ್ ಸಾಯಿಂಟ್ ಆಂಡ್ರ್ಯೂ (Andrew) ದಿ ಆಪೋಸಲ್
● ಸೈಪ್ರಸ್ (2025): ಗ್ರಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಾಕಾರಿಯೋಸ್ ||| (Makarios III)
ಅಮೆರಿಕ ಖಂಡದ ರಾಷ್ಟ್ರಗಳು
● ಬ್ರೆಜಿಲ್ (2025): ಗ್ರಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್
● ಟ್ರಿನಿಡಾಡ್ ಮತ್ತು ಟೋಬೆಗೋ (2025): ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಅಂಡ್ ಟೋಬೆಗೋ
● ಗಯಾನಾ (2024): ಆರ್ಡರ್ ಆಫ್ ಎಕ್ಸಲೆನ್ಸ್
● ಡೊಮಿನಿಕಾ (2024): ಡೊಮಿನಿಕಾ ಅವಾರ್ಡ್ ಆಫ್ ಹಾನರ್
ಆಸಿಯಾನಿಯಾ ರಾಷ್ಟ್ರಗಳು
● ಫಿಜಿ (2023): ಕಂಪೇನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ
● ಪಪುಆ ನ್ಯೂಗಿನಿಯಾ (2023): ಆರ್ಡರ್ ಆಫ್ ಲೋಗೊಹು
ನರೇಂದ್ರ ಮೋದಿಯವರ ದಾಖಲೆಗಳು
● ಅತ್ಯಂತ ದೀರ್ಘಕಾಲ ರಾಷ್ಟ್ರ ಮತ್ತು ರಾಜ್ಯದ ಅತ್ಯುನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವವರು.
● ಮಾರ್ಚ್, 22, 2026ರಂದು 8931 ದಿನಗಳ ಸೇವೆಯೊಂದಿಗೆ ದಾಖಲೆ.
● ಸ್ವತಂತ್ರ ಭಾರತದಲ್ಲಿ ಜನಿಸಿ ಪ್ರಧಾನಿಯ ಹುದ್ದೆಯನ್ನು ಅಲಂಕರಿಸಿದ ಮೊದಲ ವ್ಯಕ್ತಿ.
● ಲೋಕಸಭೆಯಲ್ಲಿ ಸಂಪೂರ್ಣ ಬಹುಮತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ.
● ಎರಡು ಬಾರಿ ಸ್ವಂತ ಬಹುಮತದೊಂದಿಗೆ, ಒಟ್ಟು ಮೂರು ಬಾರಿ ಅನುಕ್ರಮವಾಗಿ ಅಧಿಕಾರ ಪಡೆದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ.
● ಗುಜರಾತ್ ಮುಖ್ಯಮಂತ್ರಿಯಾಗಿ ಅತೀ ಹೆಚ್ಚು ಕಾಲ ಸೇವೆ.
