- ಡಾ. ಫಿರ್ಮಿ ಬೋಡೊ, ಸಹಾಯಕ ಪ್ರಾಧ್ಯಾಪಕಿ , ಜವಾಹರಲಾಲ್ ನೆಹರೂ ವಿವಿ, ನವದೆಹಲಿ
ಡಾ. ಫಿರ್ಮಿ ಬೋಡೊ ಅವರು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಸಮಾಜಶಾಸ್ತ್ರ ವಿಭಾಗದ, ಸಾಮಾಜಿಕ ವ್ಯವಸ್ಥೆಗಳ ಅಧ್ಯಯನ ಕೇಂದ್ರದಲ್ಲಿ (CSSS) ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಸ್ಸಾಂನ ದಿಮಾಸಾ ಕಚಾರಿ ಸಮುದಾಯದವರಾದ ಡಾ. ಬೋಡೊ ಅವರು, ಈಶಾನ್ಯ ಭಾರತದ ಬುಡಕಟ್ಟು ಸಮಾಜಗಳು, ಸ್ಥಳೀಯ ಜ್ಞಾನ ವ್ಯವಸ್ಥೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ಅಧ್ಯಯನಕ್ಕೆ ಒಂದು ವಿಮರ್ಶಾತ್ಮಕ ಹಾಗೂ ಬಹುಮುಖಿ ದೃಷ್ಟಿಕೋನವನ್ನು ಒದಗಿಸಬಲ್ಲರು. ಈಶಾನ್ಯ ರಾಜ್ಯಗಳ ವಿನ್ಯಾಸ, ಸಮಸ್ಯೆಗಳು ಹಾಗೂ ಪರಿಹಾರದ ಕುರಿತು ವಿಕ್ರಮದೊಂದಿಗಿನ ಸಂದರ್ಶನದಲ್ಲಿ ಅವರು ಅನೇಕ ಹೊಳಹುಗಳನ್ನು ನೀಡಿದ್ದಾರೆ.
● ರಮೇಶ ದೊಡ್ಡಪುರ
ಭಾರತದ ಅನೇಕ ಭಾಗಗಳ ಜನರು ಈಶಾನ್ಯ ಪ್ರದೇಶವನ್ನು ಒಂದು ಏಕರೂಪದ ಪ್ರದೇಶವೆಂದು ಭಾವಿಸುತ್ತಾರೆ. ಈಶಾನ್ಯ ರಾಜ್ಯಗಳು ವಾಸ್ತವವಾಗಿ ಎಷ್ಟು ವೈವಿಧ್ಯಮಯವಾಗಿವೆ? ಈಶಾನ್ಯವನ್ನು ಏಕಕಾಲದಲ್ಲಿ ಒಟ್ಟಾರೆಯಾಗಿ ಮತ್ತು ವೈವಿಧ್ಯಮಯ ಪ್ರದೇಶವಾಗಿ ಹೇಗೆ ಅರ್ಥಮಾಡಿಕೊಳ್ಳಬೇಕು?
ವಾಸ್ತವವಾಗಿ, ಈಶಾನ್ಯದ ರಾಜ್ಯಗಳ ಬಗೆಗೆ ಏಕರೂಪದ ಪ್ರದೇಶವೆಂಬ ಕಲ್ಪನೆಯೇ ಅಸತ್ಯದಿಂದ ಕೂಡಿದ್ದು. ಇದನ್ನು ವಸಾಹತುಶಾಹಿ ಆಡಳಿತಗಾರರು ಪಾಶ್ಚಿಮಾತ್ಯ ದೃಷ್ಟಿಕೋನವನ್ನು ಆಧರಿಸಿ ಅಪಪ್ರಚಾರ ಮಾಡಿದರು. ಈಶಾನ್ಯ ಪ್ರದೇಶವು ವೈವಿಧ್ಯಮಯ ಸಮುದಾಯಗಳ ನಾಡು. ನಾಗಾ, ಮಿಜೋ, ಕುಕಿ, ದಿಮಾಸಾ, ಬೋಡೋ, ಅಸ್ಸಾಮಿ ಮುಂತಾದ ಸಮುದಾಯಗಳು ತಮ್ಮದೇ ಸಂಪ್ರದಾಯಗಳು ಮತ್ತು ಸಾಮಾಜಿಕ ಆಚರಣೆಗಳನ್ನು ಹೊಂದಿವೆ. ಆದ್ದರಿಂದ, ಈ ಪ್ರದೇಶವು ಏಕರೂಪವಲ್ಲ.
ಈ ವೈವಿಧ್ಯತೆಯ ನಡುವೆಯೂ, ಈ ಸಮುದಾಯಗಳು ನಂಬುವ ಪ್ರಮುಖ ಮೌಲ್ಯಗಳನ್ನು ಗಮನಿಸಿದರೆ, ಕೆಲವು ಸಾಮ್ಯತೆಗಳಿವೆ. ಭಾವನಾತ್ಮಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಹಲವು ವಿಧಗಳಲ್ಲಿ ಸಾಮಾನ್ಯವಾಗಿವೆ. ಈ ಸಮುದಾಯಗಳನ್ನು ಪ್ರತ್ಯೇಕವಾಗಿ ಅಥವಾ ಒಂಟಿಯಾಗಿ ನೋಡುವುದರ ಬದಲಾಗಿ, ಭಾರತೀಯ ನಾಗರಿಕತೆಯ ವಿಶಾಲ ಹರಿವಿನ ಮುಂದುವರಿದ ಭಾಗವಾಗಿ ಅರ್ಥಮಾಡಿಕೊಳ್ಳುವುದು ಉತ್ತಮ. ಈಶಾನ್ಯವು ಭಾರತೀಯ ನಾಗರಿಕತೆಯ ಹೊರಗಿಲ್ಲ. ಪ್ರಕೃತಿಯ ಬಗ್ಗೆ ಗೌರವ, ಪ್ರಕೃತಿಯಲ್ಲಿ ದೈವತ್ವದ ಪರಿಕಲ್ಪನೆ ಮತ್ತು ನೈಸರ್ಗಿಕ ವಿಚಾರಗಳ ಮೇಲಿನ ಭಕ್ತಿಯಂತಹ ಮೌಲ್ಯಗಳು ಆಳವಾಗಿ ಇಲ್ಲಿ ಬೇರೂರಿವೆ. ಮರಗಳು, ಕಲ್ಲುಗಳು, ನದಿಗಳು ಮತ್ತು ಪ್ರಕೃತಿಯ ಅನೇಕ ಇತರ ಅಂಶಗಳನ್ನು ಜನರು ಪೂಜಿಸುತ್ತಾರೆ. ಉದಾಹರಣೆಗೆ, ಪವಿತ್ರ ತೋಪುಗಳು ಮತ್ತು ಪವಿತ್ರ ಕಾಡುಗಳ ಪರಿಕಲ್ಪನೆ ಇದೆ, ಇದು ಪರಿಸರ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸಹ ಪ್ರತಿಬಿಂಬಿಸುತ್ತದೆ. ಇಂತಹ ಆಚರಣೆಗಳು ಭಾರತದ ಇತರ ಭಾಗಗಳಲ್ಲಿಯೂ ಕಂಡುಬರುತ್ತವೆ. ಆದ್ದರಿಂದ, ಈಶಾನ್ಯವನ್ನು ವೈವಿಧ್ಯಮಯ ಮತ್ತು ನಿರಂತರ ನಾಗರಿಕತೆಯ ಸಂಪ್ರದಾಯದ ಭಾಗವಾಗಿ ನೋಡಬೇಕಾಗುತ್ತದೆ.




ಈಶಾನ್ಯ ರಾಜ್ಯಗಳ ಸಮುದಾಯಗಳ ನಡುವೆ ಇರುವ ಸಮಾನವಾದ ಎಳೆಯ ಒಂದು ಉದಾಹರಣೆಯನ್ನು ನೀವು ನೀಡಬಹುದೇ?
ಒಂದು ಉದಾಹರಣೆ ಎಂದರೆ, ನದಿಗಳ ಮೇಲಿನ ಭಕ್ತಿ. ನನ್ನದೇ ಸಮುದಾಯವಾದ ದಿಮಾಸಾ ಸಮುದಾಯವು ‘ಮಹಾನದಿಯ ಮಕ್ಕಳು’ (Sons of the big river) ಎಂಬ ಅರ್ಥವನ್ನು ನೀಡುವ ನುಡಿಗಟ್ಟಿನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ನಮ್ಮ ಸಾಮ್ರಾಜ್ಯಗಳು ಯಾವಾಗಲೂ ನದಿಗಳ ಬಳಿಯೇ ನೆಲೆಗೊಂಡಿದ್ದವು. ನದಿಗೆ ಹೋಗಿ ಪೂಜಾ ವಿಧಿವಿಧಾನಗಳನ್ನು ನಿರ್ವಹಿಸುವ ಅನೇಕ ಕುಲದ ಆಚರಣೆಗಳಿವೆ. ಈ ಸ್ಥಳೀಯ ಆಚರಣೆಗಳು ನದಿಗಳ ಬಗ್ಗೆ ನಮಗಿರುವ ಪೂಜ್ಯಭಾವನೆಯನ್ನು ಪ್ರದರ್ಶಿಸುತ್ತವೆ. ನಮಗೆ ನದಿ ಅಥವಾ ನೀರು ಕೇವಲ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುವ ವಸ್ತುವಲ್ಲ. ಇದು ನಮ್ಮ ಅಸ್ಮಿತೆಯಾಗಿದೆ, ನಾವು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ನಮ್ಮ ಪೂರ್ವಜರ ಗುರುತೂ ಆಗಿದೆ.
ಇಡೀ ಈಶಾನ್ಯ ಪ್ರದೇಶವು ಸಾಂಸ್ಕೃತಿಕವಾಗಿ ಭಾರತದ ಉಳಿದ ಭಾಗಗಳೊಂದಿಗೆ ಹೇಗೆ ಸಂಪರ್ಕ ಹೊಂದಿದೆ ಎಂದು ತಿಳಿಸಬಹುದೇ?
ಮಹಾಭಾರತದಿಂದ ಒಂದು ಉದಾಹರಣೆ ನೀಡಬಹುದು. ದಿಮಾಸಾ ಜನರು ನಮ್ಮನ್ನು ನಾವು ಘಟೋತ್ಕಚನ ವಂಶಸ್ಥರು ಎಂದು ನಂಬುತ್ತೇವೆ. ಹಿಡಿಂಬೆ ಮತ್ತು ಭೀಮನ ಮಗನೇ ಘಟೋತ್ಕಚ. ಅದೇ ರೀತಿ, ಮಹಾಭಾರತದಲ್ಲಿ ಕಾಣಸಿಗುವ ಚಿತ್ರಾಂಗದೆಯು ಅರ್ಜುನನ ಪತ್ನಿ. ಈಕೆಯು ಈಶಾನ್ಯ ಪ್ರದೇಶದೊಂದಿಗೆ ಸಂಬಂಧ ಹೊಂದಿದ್ದಾಳೆ. ಕಾರ್ಬಿ ಸಮುದಾಯದಲ್ಲಿ ರಾಮಾಯಣದ ಒಂದು ಆವೃತ್ತಿ ಇದೆ, ಇದನ್ನು ‘ಸಬಿನ್ ಅಲುನ್’ ಎಂದು ಕರೆಯಲಾಗುತ್ತದೆ. ಇಂದಿಗೂ ಹಿಡಿಂಬಾ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವ ಪದ್ಧತಿಯಿದೆ. ವ್ಯಾಪಾರ ಸಂಬಂಧಗಳ ರೂಪದಲ್ಲಿ ಆರ್ಥಿಕ ಸಂಪರ್ಕಗಳೂ ಭಾರತದ ಇತರ ಭಾಗದೊಂದಿಗೆ ಇದೆ.
ಕೆಲವು ಧಾರ್ಮಿಕ ಸಂಪರ್ಕಗಳೂ ಇವೆ. ಉದಾಹರಣೆಗೆ, ಶಿವನ ಆರಾಧನೆಯನ್ನು ಸೂಚಿಸುವ ದೇವಾಕು ಅವಶೇಷಗಳನ್ನು ಒಳಗೊಂಡಂತೆ ಶಿವ ದೇವಾಲಯಗಳ ಅವಶೇಷಗಳು ಇವೆ. ಕಾಮಾಕ್ಯ ದೇವಾಲಯ ಮತ್ತು ತಂತ್ರದ ಸಂಪ್ರದಾಯವೂ ಈ ವಿಶಾಲವಾದ ನಾಗರಿಕತೆಯ ನಿರಂತರತೆಯ ಭಾಗವಾಗಿದೆ.
ಈ ನಾಗರಿಕತೆಯ ಮೌಲ್ಯಗಳು ಇಂದಿಗೂ ಸಮುದಾಯಗಳಲ್ಲಿ ಜೀವಂತವಾಗಿವೆಯೇ ಅಥವಾ ವಸಾಹತು ಕಾರಣಕ್ಕಾಗಿ ಅವು ಮೂಲೆಗುಂಪಾಗಿವೆಯೇ?
ಪ್ರಮುಖವಾಗಿ ವಸಾಹತು ಕಾಲದಲ್ಲಿ ಈ ಪ್ರದೇಶವನ್ನು ದೀರ್ಘಕಾಲ ಪ್ರತ್ಯೇಕವಿರಿಸಿದ್ದರಿಂದಾಗಿ ಈಶಾನ್ಯ ಸಮುದಾಯಗಳು ಮತ್ತು ಭಾರತದ ಉಳಿದ ಭಾಗಗಳ ನಡುವೆ ಸ್ವಲ್ಪಮಟ್ಟಿಗೆ ಸಾಂಸ್ಕೃತಿಕ ಕಂದಕ ನಿರ್ಮಾಣವಾಗಿದೆ ಎನ್ನುವುದು ನಿಜ. ಧಾರ್ಮಿಕ ಮತಾಂತರಗಳು ಸಹ ಸಾಂಸ್ಕೃತಿಕ ಆಚರಣೆಗಳಲ್ಲಿನ ಬದಲಾವಣೆಗಳಿಗೆ ಕಾರಣವಾಗಿವೆ. ವಾಸ್ತವವಾಗಿ, ಸ್ವಾತಂತ್ರ್ಯದ ನಂತರ ಈ ಪ್ರತ್ಯೇಕವಾಗಿರಿಸುವಿಕೆಯು ಹೆಚ್ಚಾಯಿತು. ಅದಾಗ್ಯೂ, ನಾನು ಮೊದಲು ಪ್ರಸ್ತಾಪಿಸಿದ ಐತಿಹಾಸಿಕ ಕೊಂಡಿಗಳನ್ನು ಪುನರುಜ್ಜೀವಿಸಿದರೆ ಆ ಸಂಪರ್ಕಗಳನ್ನು ಪುನಃಸ್ಥಾಪಿಸಬಹುದು ಎಂಬ ಭರವಸೆಯಿದೆ.
ಈಶಾನ್ಯ ಪ್ರದೇಶಕ್ಕೆ ಸಂವಿಧಾನದ ಆರನೇ ಪರಿಚ್ಛೇದದ ಮಹತ್ವ ಮತ್ತು ಅದರ ಸಾಧಕ-ಬಾಧಕಗಳನ್ನು ವಿವರಿಸಬಹುದೇ?
ಪ್ರಸ್ತುತ ಪರಿಸ್ಥಿತಿಯಲ್ಲಿ, ಅನುಚ್ಛೇದ ಆರನ್ನು ಅಲುಗಾಡಿಸಬಾರದು ಎಂದು ನಾನು ನಂಬುತ್ತೇನೆ. ಇದು ಅನೇಕ ಸಮುದಾಯಗಳ ಧರ್ಮಗಳು, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಿಸಲು ಗುರಾಣಿಯನ್ನು ಒದಗಿಸಿದೆ. ದೀರ್ಘಕಾಲದ ಪ್ರತ್ಯೇಕತೆಯ ಕಾರಣದಿಂದಾಗಿ ಈ ಪ್ರದೇಶದಲ್ಲಿ ಒಂದು ರೀತಿಯ ಮಾನಸಿಕ ತಡೆಗೋಡೆ ಬೆಳೆದಿದೆ. ಅನುಚ್ಛೇದ ಆರನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಪರಿಹಾರವಾಗುವ ಬದಲು ಹೊಸ ಸಮಸ್ಯೆಗಳನ್ನು ಸೃಷ್ಟಿಸಬಹುದು ಮತ್ತು ಸಮುದಾಯಗಳನ್ನು ಇನ್ನಷ್ಟು ದುರ್ಬಲಗೊಳಿಸಬಹುದು. ಹಾಗೆ ನೋಡಿದರೆ ಪ್ರಸ್ತುತ ಇದನ್ನು ತೆಗೆದುಹಾಕಲು ಗಂಭೀರವಾಗಿ ಯಾರೂ ಪ್ರಸ್ತಾಪಿಸುತ್ತಿಲ್ಲ. ಕೆಲವು ರಾಜಕೀಯ ಶಕ್ತಿಗಳು ಚುನಾವಣಾ ಲಾಭವನ್ನು ಪಡೆಯಲು ಇದನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿವೆ. ಇದರಲ್ಲಿ ಆಗುವ ಬದಲಾವಣೆಗಳು ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಆದ್ದರಿಂದ, ಅನುಚ್ಛೇದ ಅರನ್ನು ಎಚ್ಚರಿಕೆಯಿಂದ ನೋಡಬೇಕು.
ಅಸ್ಸಾಂ, ನಾಗಾಲ್ಯಾಂಡ್ನಲ್ಲಿ ರಾಜಕೀಯ ಪರಿಸ್ಥಿತಿ ಹೇಗಿದೆ?
ಪ್ರಸ್ತುತ ಅಸ್ಸಾಂ ಮುಖ್ಯಮಂತ್ರಿ (ಹಿಮಂತ ಬಿಸ್ವ ಶರ್ಮ) ಅಕ್ರಮ ವಲಸೆಯ ಸಮಸ್ಯೆಯನ್ನು ನಿಭಾಯಿಸುತ್ತಿರುವ ರೀತಿಯಿಂದಾಗಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಅದಾಗ್ಯೂ, ಇಡೀ ಈಶಾನ್ಯವನ್ನು ಏಕರೂಪಗೊಳಿಸಿ ಅದನ್ನು ಪ್ರತ್ಯೇಕ ಘಟಕವಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವ National People’s Party – NPP ಎಂಬ ಹೊಸ ರಾಜಕೀಯ ಪಕ್ಷವೊಂದು ಹೊರಹೊಮ್ಮುತ್ತಿದೆ. ಇಂತಹ ರಾಜಕೀಯ ನಿರ್ಮಾಣವನ್ನು ನಾನು ಸ್ವಲ್ಪ ಆತಂಕದಿಂದಲೇ ನೋಡುತ್ತೇನೆ. ಅಂತಹ ಪ್ರಯತ್ನಗಳು ಏಕೀಕರಣವನ್ನು ದುರ್ಬಲಗೊಳಿಸಬಹುದೇ ಎಂಬ ಬಗ್ಗೆ ನನಗೆ ಆತಂಕ ಇದೆ. ಈ ಪಕ್ಷವು ಅನೇಕ ರಾಜಕೀಯ ಸಭೆಗಳನ್ನು ಆಯೋಜಿಸುವುದರೊಂದಿಗೆ ರಾಜಕೀಯ ಚಟುವಟಿಕೆಗಳು ಸಾಕಷ್ಟು ಸಕ್ರಿಯವಾಗುತ್ತಿವೆ. ಈ ನಾಯಕರಲ್ಲಿ ಹಲವರು ಸ್ವತಃ ಯುವಕರಾಗಿರುವುದರಿಂದ, ಅವರು ಯುವಕರ ಭಾವನೆಗಳ ಮೇಲೆ ಪ್ರಭಾವ ಬೀರಲು ಸಮರ್ಥರಾಗಿದ್ದಾರೆ. ಅದು ಸ್ವಲ್ಪಮಟ್ಟಿಗೆ ಆತಂಕಕಾರಿಯಾಗಿದೆ. ಈ ಕಾರ್ಯಕ್ಕೆ ಸಾಕಷ್ಟು ಹಣವನ್ನು ಸಹ ಖರ್ಚು ಮಾಡಲಾಗುತ್ತಿದೆ. ಈ ಹಣ ಎಲ್ಲಿಂದ ಬರುತ್ತಿದೆ ಎಂದು ಕೇಳಲೇಬೇಕಾಗಿದೆ.
ಇಂದು ಈಶಾನ್ಯ ಯುವಜನರು ಎದುರಿಸುತ್ತಿರುವ ಪ್ರಮುಖ ಸವಾಲುಗಳು ಯಾವುವು?
ನಿರುದ್ಯೋಗವು ಒಂದು ಪ್ರಮುಖ ಸವಾಲು. ಮತ್ತೊಂದು ಸಮಸ್ಯೆಯೆಂದರೆ, ಯುವಕರಲ್ಲಿ ಶಿಸ್ತಿನ ಜೀವನಶೈಲಿಯ ಕೊರತೆ. ಮಾದಕವ್ಯಸನ ಮತ್ತು ಮದ್ಯಪಾನವೂ ಇಲ್ಲಿನ ಪ್ರಮುಖ ಸಮಸ್ಯೆಗಳಾಗಿವೆ. ಈ ಪ್ರದೇಶದಲ್ಲಿ ಹೇರಳವಾದ ಕೃಷಿ ಸಂಪನ್ಮೂಲಗಳಿರುವುದರಿಂದ ಜನರು ಸಹಜವಾಗಿ ಸ್ವಾವಲಂಬಿಗಳಾಗಿದ್ದಾರೆ. ಇಲ್ಲಿನ ಜನರಲ್ಲಿ ಭಿಕ್ಷೆ ಬೇಡುವವರನ್ನು ಕಾಣುವುದು ಅತಿ ವಿರಳ. ಒಂದು ಪ್ರಮಾಣದ ಅಭದ್ರತೆಯು ಜೀವನವನ್ನು ರೂಪಿಸುತ್ತದೆ. ಆದರೆ ಇಲ್ಲಿನ ಯುವಕರಿಗೆ ಅತಿಯಾದ ಸೌಲಭ್ಯಗಳಿಂದಾಗಿ ತಮ್ಮ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಬೇರುಗಳಿಂದ ದೂರ ಸರಿಯುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ಮತ್ತು ಸಲಹೆಯ ಅಗತ್ಯವಿದೆ. ನಾನು ವಿಶೇಷವಾಗಿ ಯುವಕರ ಬಗ್ಗೆ ಆತಂಕ ಹೊಂದಿದ್ದೇನೆ.
ಯುವಕರ ಕುರಿತೇ ಹೆಚ್ಚು ಆತಂಕ ಏಕೆ? ಯುವಕರು ಹಾಗೂ ಯುವತಿಯರ ಸಮಸ್ಯೆಗಳನ್ನು ಏಕೆ ಭಿನ್ನವಾಗಿ ನೋಡುತ್ತಿದ್ದೀರಿ?
ಈಶಾನ್ಯ ರಾಜ್ಯಗಳಲ್ಲಿನ ಯುವತಿಯರು ಹೆಚ್ಚು ಜವಾಬ್ದಾರಿಯುತವಾಗಿದ್ದಾರೆ. ಅವರು ತಮ್ಮ ಪೋಷಕರ ಮಾತು ಕೇಳುತ್ತಾರೆ, ಶಿಸ್ತಿನಿಂದ ಇರುತ್ತಾರೆ ಮತ್ತು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ. ಆದರೆ ಯುವಕರು ಹೆಚ್ಚಾಗಿ ಜವಾಬ್ದಾರಿಯುತವಾಗಿರುವುದಿಲ್ಲ, ಶಿಕ್ಷಣವನ್ನು ಅರ್ಧದಲ್ಲೇ ಬಿಡುತ್ತಾರೆ ಉದ್ಯೋಗಗಳನ್ನು ಹುಡುಕುವ ಒತ್ತಡವನ್ನು ಅನುಭವಿಸುತ್ತಾರೆ. ಮದ್ಯಪಾನ, ಮಾದಕವ್ಯಸನಗಳು ಗಂಭೀರ ಸಮಸ್ಯೆಗಳಾಗಿವೆ.
ಭಾರತದ ಇತರ ಅನೇಕ ಭಾಗಗಳಲ್ಲಿ ಜನರು ಸಾಮಾನ್ಯವಾಗಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಇಲ್ಲಿ…
ಹೌದು, ಆ ನಿಟ್ಟಿನಲ್ಲಿ ಈಶಾನ್ಯ ಭಾರತದ ಸಮಾಜವು ವಿಭಿನ್ನವಾಗಿದೆ. ನಾನು ಅದನ್ನು ಸ್ವಲ್ಪ ತಮಾಷೆಯಾಗಿ, ಇಲ್ಲಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಬದಲಿಗೆ ‘ಬೇಟಾ ಪಢಾವೋ, ಬೇಟಾ ಬಚಾವೋ’ ಆಗಬೇಕಿದೆ ಎಂದು ಹೇಳುತ್ತಿರುತ್ತೇನೆ. ಈಶಾನ್ಯದಲ್ಲಿ ಹೆಣ್ಣು ಭ್ರೂಣಹತ್ಯೆಯ ಸಮಸ್ಯೆ ಇಲ್ಲ. ನಿಜ ಹೇಳಬೇಕೆಂದರೆ, ಕೆಲವು ಕುಟುಂಬಗಳು, ಹೆಣ್ಣುಮಕ್ಕಳನ್ನು ಬೆಳೆಸುವುದು ಸುಲಭ ಆದರೆ ಗಂಡುಮಕ್ಕಳನ್ನು ಬೆಳೆಸುವುದು ಕಷ್ಟ ಎಂದು ತಮಾಷೆಯಾಗಿ ಹೇಳುತ್ತವೆ. ಮೂಲಭೂತ ವಿಷಯವೆಂದರೆ ಯುವಕರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಅವರ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ಪುರುಷತ್ವ ಮತ್ತು ಸ್ತ್ರೀತ್ವದ ಬಗೆಗಿನ ಕೆಲವು ಪಾಶ್ಚಿಮಾತ್ಯ ನಿರೂಪಣೆಗಳ ಅತಿಯಾದ ಪ್ರಭಾವವು ಯುವಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ.
ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ಪಾತ್ರವನ್ನು ಹೇಗೆ ಕಾಣುತ್ತೀರಿ?
2014ರಿಂದ ಸಂಪರ್ಕ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ರೈಲ್ವೆ, ರಸ್ತೆ ಜಾಲಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ಗಣನೀಯವಾಗಿ ವಿಸ್ತರಿಸಿವೆ. ಆ ದೃಷ್ಟಿಕೋನದಿಂದ ಸರ್ಕಾರದ ಕೆಲಸ ತೃಪ್ತಿದಾಯಕವಾಗಿದೆ. ಆದರೆ, ಅಭಿವೃದ್ಧಿಯು ಸಂಪೂರ್ಣವಾಗಿ ಸರ್ಕಾರದ ಮೇಲೆ ಅವಲಂಬಿತವಾಗಿರುವುದಿಲ್ಲ. ಸರ್ಕಾರ ರಸ್ತೆಗಳನ್ನು ನಿರ್ಮಿಸಬಹುದು, ಆದರೆ ಅದರ ಮೇಲೆ ನಡೆಯುವ ಕೆಲಸವನ್ನು ಜನರೇ ಮಾಡಬೇಕು. ಸಮಾಜಕ್ಕೂ ತನ್ನ ಜವಾಬ್ದಾರಿಗಳಿವೆ ಎನ್ನುವುದನ್ನು ಅರಿಯಬೇಕು. ಮಕ್ಕಳ ಸರಿಯಾದ ಪಾಲನೆ, ನೈತಿಕ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸಮುದಾಯಗಳು ಖಚಿತಪಡಿಸಿಕೊಳ್ಳಬೇಕು.
ಸಮಾಜವೇ ಸಕ್ರಿಯವಾಗಿರುವ ಸಮುದಾಯ-ಮಟ್ಟದ ಉದಾಹರಣೆಗಳಿವೆಯೇ?
ನನ್ನ ಸಮುದಾಯದಲ್ಲಿ ಇತ್ತೀಚೆಗೆ ಕೆಲವು ಸಕಾರಾತ್ಮಕ ಪ್ರಯತ್ನಗಳನ್ನು ನೋಡಿದ್ದೇನೆ. ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸಲು ವಿವಿಧ ಸಂಸ್ಥೆಗಳನ್ನು ರಚಿಸಲಾಗಿದೆ. North Cachar Hills Autonomous Council (NCHAC) ಮುಖ್ಯ ಕಾರ್ಯನಿರ್ವಾಹಕ ಸದಸ್ಯರಾದ (CEM) ದೆಬೋಲಾಲ್ ಗೋರ್ಲೋಸಾ ಅವರ ನೇತೃತ್ವದಲ್ಲಿ ಸಂಸ್ಕೃತಿ ಸಂರಕ್ಷಣೆಯ ಹಾಗೂ ಪ್ರಚಾರದ ಕಾರ್ಯ ನಡೆಯುತ್ತಿದೆ. ವಿಶ್ವ ಪರಂಪರೆಯ ದಿನವನ್ನು ಆಚರಿಸುವುದು ಮತ್ತು ಸಾಂಪ್ರದಾಯಿಕ ಉಡುಗೆ ಮತ್ತು ಜಾನಪದ ಪ್ರದರ್ಶನಗಳಿಗೆ ಪ್ರೋತ್ಸಾಹ ನೀಡುವುದರಂತಹ ಉಪಕ್ರಮಗಳು ಯುವ ಪೀಳಿಗೆಯಲ್ಲಿ ಸಾಂಸ್ಕೃತಿಕ ಅರಿವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತಿವೆ. ಆದರೂ ಈ ನಿಟ್ಟಿನಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ.
ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಪ್ರವಾಸೋದ್ಯಮವು ಹೇಗೆ ಕೊಡುಗೆ ನೀಡಬಲ್ಲದು?
ಪ್ರವಾಸೋದ್ಯಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜನರು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಗ್ರಹಿಕೆಗಳು, ಪೂರ್ವಾಗ್ರಹಗಳು ಬದಲಾಗುತ್ತವೆ. ಸ್ಥಳೀಯ ಸಮುದಾಯಗಳು ಸಹ ಪ್ರವಾಸಿಗರನ್ನು ಅಪರಿಚಿತರು ಅಥವಾ ಹೊರಗಿನವರು ಎಂದು ನೋಡದೆ ನೆರೆಹೊರೆಯವರಂತೆ ನೋಡಲು ಪ್ರಾರಂಭಿಸುತ್ತವೆ. ಆದ್ದರಿಂದ, ಪ್ರವಾಸೋದ್ಯಮವು ಭಾವೈಕ್ಯತೆಯನ್ನು ಉತ್ತೇಜಿಸಲು ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದು.
