15ನೇ ಶತಮಾನದ ಅಂತ್ಯದ ಸಮಯ. ಬ್ರಹ್ಮಪುತ್ರ ನದಿಯ ಕಣಿವೆಯಿಂದ ಹೊರಟ ಯುವಕನೊಬ್ಬ, ಕಾಲ್ನಡಿಗೆಯಲ್ಲೇ ಇಡೀ ಭಾರತವರ್ಷವನ್ನು ಸುತ್ತಲು ಆರಂಭಿಸಿದ. ಪುರಿ ಜಗನ್ನಾಥ, ಕಾಶಿ, ಮಥುರಾ, ವೃಂದಾವನ, ಅಯೋಧ್ಯೆ, ಪ್ರಯಾಗ ಹೀಗೆ ಆರ್ಯಾವರ್ತದ ಮೂಲೆಮೂಲೆಗಳನ್ನು ಬರೋಬ್ಬರಿ 12 ವರ್ಷಗಳ ಕಾಲ ದರ್ಶಿಸಿದ. ಕಾಮರೂಪ (ಇಂದಿನ ಅಸ್ಸಾಂ) ಪ್ರದೇಶದಿಂದ ಬಂದು ಇಡೀ ಭಾರತದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಸಾರವನ್ನು ಹೀರಿಕೊಂಡು, ಅದನ್ನು ಮತ್ತೆ ತಮ್ಮ ನಾಡಿನ ಜನತೆಗೆ ಉಣಬಡಿಸಿದ ಆ ಯುವಕನೇ ಈಶಾನ್ಯ ಭಾರತದ ಭಕ್ತಿ ಆಂದೋಳನದ ಹರಿಕಾರ, ಅಸ್ಸಾಮಿನ ಮಹಾನ್ ಸಮಾಜ ಸುಧಾರಕ ‘ಶ್ರೀಮಂತ ಶಂಕರದೇವ’. ಅವರ ಈ ದೀರ್ಘ ಯಾತ್ರೆಯು ಪೂರ್ವೋತ್ತರವನ್ನು ಭಾರತದ ಮುಖ್ಯವಾಹಿನಿಯೊಂದಿಗೆ ಬೆಸೆದ ಐತಿಹಾಸಿಕ ಹಾಗೂ ನಾಗರಿಕತೆಯ ಅತ್ಯಂತ ಮಹತ್ವದ ಘಟನೆಯಾಯಿತು.
ಶಂಕರದೇವರು ಈಶಾನ್ಯ ಭಾರತದಲ್ಲಿ ಭಾರತೀಯ ನಾಗರಿಕತೆಯನ್ನು ಪುನರುಜ್ಜೀವನಗೊಳಿಸಿದ ಅಪ್ರತಿಮ ದಾರ್ಶನಿಕರು. ದೇಶದೆಲ್ಲೆಡೆ ಭಕ್ತಿ ಆಂದೋಳನವು ಜಾಗೃತವಾಗಿದ್ದ ಆ ಕಾಲಘಟ್ಟದಲ್ಲಿ, ಶಂಕರದೇವರು ಅಸ್ಸಾಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ‘ಏಕಶರಣ ನಾಮಧರ್ಮ’ (ನವ-ವೈಷ್ಣವ ಪಂಥ) ಎನ್ನುವ ಭಕ್ತಿ ಚಳವಳಿಯನ್ನು ಹುಟ್ಟುಹಾಕಿದರು. ಯಾವುದೇ ಜಾತಿ, ಪಂಥ, ಅಥವಾ ಬುಡಕಟ್ಟುಗಳ ತಾರತಮ್ಯವಿಲ್ಲದೆ ಇಡೀ ಸಮಾಜವನ್ನು ಕೃಷ್ಣಭಕ್ತಿ ಹಾಗೂ ನಾಮಸ್ಮರಣೆಯ ಮೂಲಕ ಅವರು ಒಗ್ಗೂಡಿಸಿದರು.
ಮಹತ್ಕಾರ್ಯಕ್ಕೆ ಕೇಂದ್ರ ಬಿಂದುವಾಗಿದ್ದೇ ಅವರು ಸ್ಥಾಪಿಸಿದ ‘ಸತ್ರ’ಗಳು (Satra). ಈ ಸತ್ರಗಳು ಕೇವಲ ಪ್ರಾರ್ಥನಾ ಮಂದಿರಗಳಾಗಿ ಉಳಿಯಲಿಲ್ಲ; ಬದಲಿಗೆ ಕಲೆ, ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸದ ಬೃಹತ್ ಕೇಂದ್ರಗಳಾಗಿ ರೂಪುಗೊಂಡವು. ಶಂಕರದೇವರು ಮತ್ತು ಅವರ ಶಿಷ್ಯ ಮಾಧವದೇವರು ಬೆಳೆಸಿದ ಈ ಸತ್ರಗಳು, ಆ ಭಾಗದ ಜನರಿಗೆ ಬಲವಾದ ಸಾಂಸ್ಕೃತಿಕ ಗುರುತನ್ನು ನೀಡಿದವು. ಇಂದಿಗೂ ಅಸ್ಸಾಂನ ಮಾಜುಲಿ ದ್ವೀಪ ಸೇರಿದಂತೆ ಹಲವೆಡೆ ಈ ಸತ್ರಗಳು ಹಿಂದೂ ಪರಂಪರೆಯನ್ನು ಕಾಪಾಡುವ ಜೀವಂತ ವಿಶ್ವವಿದ್ಯಾಲಯಗಳಾಗಿ, ಸಮಾಜವನ್ನು ಒಗ್ಗೂಡಿಸುವ ಭದ್ರ ಕೊಂಡಿಗಳಾಗಿ ಕಾರ್ಯನಿರ್ವಹಿಸುತ್ತಿವೆ. (ಈ ಸಂಚಿಕೆಯ ಮುಖಪುಟ ಚಿತ್ರ)
ಶಂಕರದೇವರ ಮತ್ತೊಂದು ಅತಿ ದೊಡ್ಡ ಕೊಡುಗೆಯೆಂದರೆ ‘ಅಂಕಿಯಾ ನಾಟ್’ ಅಥವಾ ‘ಭಾವೋನಾ’ (Bhaona) ಎಂಬ ವಿಶಿಷ್ಟ ರಂಗಭೂಮಿ ಕಲೆ. ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮತ್ತು ಭಾಗವತದ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅವರು ಈ ನಾಟಕ ಮಾಧ್ಯಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದರು. ಈ ನಾಟಕಗಳಲ್ಲಿ ಬಳಸುವ ಸಾಂಪ್ರದಾಯಿಕ ಮುಖವಾಡಗಳು ವಿಶಿಷ್ಟವಾದವು. ಬಿದಿರು, ಮಣ್ಣು ಮತ್ತು ನೈಸರ್ಗಿಕ ಬಣ್ಣಗಳಿಂದ ತಯಾರಾಗುವ ಈ ಮುಖವಾಡಗಳು ಕರಕುಶಲತೆಯ ಅದ್ಭುತ ಮಾದರಿಯಾಗಿದ್ದು, ಕಥೆಯ ಪಾತ್ರಗಳ ದೈವಿಕತೆ ಹಾಗೂ ರೌದ್ರತೆಯನ್ನು ಪ್ರೇಕ್ಷಕರಿಗೆ ನೇರವಾಗಿ ದಾಟಿಸುವ ಪ್ರಬಲ ಸಾಧನಗಳಾದವು. ಈ ಮೂಲಕ ಅವರು ಈಶಾನ್ಯದ ಜನಮಾನಸದಲ್ಲಿ ರಾಮ-ಕೃಷ್ಣರ ಆದರ್ಶಗಳನ್ನು ಶಾಶ್ವತವಾಗಿ ಅಚ್ಚೊತ್ತಿದರು.
ವಸಾಹತುಶಾಹಿ ಆಡಳಿತ ಕಾಲದಲ್ಲಿ ಹುಟ್ಟುಹಾಕಲ್ಪಟ್ಟ ಪ್ರತ್ಯೇಕತೆಯ ಭಾವನೆ, ಆನಂತರದ ದಿನಗಳಲ್ಲಿ ನಡೆದ ಮತಾಂತರ, ಬಾಂಗ್ಲಾ ನುಸುಳುಕೋರರ ಹಾವಳಿ ಹಾಗೂ ಉಗ್ರವಾದದಂತಹ ಹತ್ತು ಹಲವು ಸವಾಲುಗಳ ನಡುವೆಯೂ ಈಶಾನ್ಯದ ಜನತೆ ತಮ್ಮ ಮೂಲ ಭಾರತೀಯ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ ಎಂದರೆ, ಅದಕ್ಕೆ ಶಂಕರದೇವರು ಬಿತ್ತಿದ ಭಕ್ತಿಯ ಬೀಜ ಮತ್ತು ಸತ್ರಗಳು ಬೆಳೆಸಿದ ಸಾಂಸ್ಕೃತಿಕ ಬೇರುಗಳೂ ಕಾರಣ. ಈಶಾನ್ಯ ಭಾರತ ಎಂದರೆ ಇಷ್ಟೇ ಅಲ್ಲ. ಸೆವೆನ್ ಸಿಸ್ಟರ್ಸ್, ಅಷ್ಟ ಲಕ್ಷ್ಮಿಯರು ಎಂದು ಒಂದು ಗುಂಪು ಮಾಡಿ ಹೇಳುವಷ್ಟು ಏಕರೂಪವನ್ನು ಹೊಂದಿಲ್ಲ. ವೈವಿಧ್ಯತೆಯ ಈ ಪ್ರದೇಶವನ್ನು ಭಾರತದ ಉಳಿದ ಭಾಗ ಇನ್ನೂ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಈಶಾನ್ಯ ಎಂದಕೂಡಲೆ ಸಮಸ್ಯೆ ಎನ್ನುವಂತೆ ಅಲ್ಲದೆ ಅಲ್ಲಿನ ಸಂಸ್ಕೃತಿ, ಸಹಜತೆಯನ್ನೂ ಅರಿಯಬೇಕಾಗಿದೆ. ರಸ್ತೆ, ರೈಲ್ವೆಯಂತಹ ಭೌತಿಕ, ಅತ್ಯಾವಶ್ಯಕ ಅಭಿವೃದ್ಧಿಯ ವೇಗವೂ ಕಳೆದ 2014ರಿಂದ ಈಚೆಗೆ ಹೆಚ್ಚಾಗಿದೆ. ಇದೆಲ್ಲವನ್ನೂ ಕಣ್ತುಂಬಿ ಕೊಡುವ ನಿಟ್ಟಿನಲ್ಲಿ, ಅಸ್ಸಾಂನ ಸಿಲಚರ್ನಲ್ಲಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾದ ಮಂಜುನಾಥ ಮಂಗಲಗಿ ಅವರು ಮುಖಪುಟ ಲೇಖನ ಒದಗಿಸಿದ್ದಾರೆ. ಅಸ್ಸಾಂನ ದಿಮಾಸಾ ಸಮುದಾಯದವರಾದ, ಇದೀಗ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಫಿರ್ಮಿ ಬೋಡೊ ಅವರು ವಿಶೇಷ ಸಂದರ್ಶನದಲ್ಲಿ ಅನೇಕ ಹೊಳಹುಗಳನ್ನು ನೀಡಿದ್ದಾರೆ.
