– ನಾರಾಯಣ ಶೇವಿರೆ, ಸಂಘಟನಾ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ
ಈ ಸೃಷ್ಟಿ ಸಾಧ್ಯವಾದುದು ಹಲವಾಗಬೇಕೆಂಬ ‘ಏಕ’ದ ಸಂಕಲ್ಪದಿಂದ ಎಂಬ ವಿವರವು ಉಪನಿಷತ್ತಿನದು. ಆ ‘ಏಕ’ವನ್ನು ಆತ್ಮವೆನ್ನಿ, ಭಗವಂತನೆನ್ನಿ, ದೇವರೆನ್ನಿ.. ಉಪನಿಷದ್ ಅದನ್ನು ಸೂಚಿಸುವುದು ‘ತತ್’ – ಅದು ಎಂದೇ; ಮತ್ತಾವ ಪದಗಳ ಹಂಗಿಲ್ಲದೆ. ಅದು ತಾನೊಂದೇ ಇತ್ತು. ಅನೇಕವಾಗಬೇಕೆಂದು ಬಯಸಿತು. ಅನೇಕವಾಯಿತು. ಒಂದಿದ್ದಂತೆ ಇನ್ನೊಂದಿಲ್ಲ ಎಂಬಂತೆ ಅನೇಕವಾಯಿತು. ಅಂದರೆ ವಿಧವಿಧವಾಯಿತು. ವೈವಿಧ್ಯವು ಸೃಷ್ಟಿಯ ಮೂಲಭೂತ ಲಕ್ಷಣ.
ಅಚ್ಚರಿ ಎಂದರೆ ಈ ಮೂಲಭೂತ ಲಕ್ಷಣದ ಮೂಲವು ಈ ಲಕ್ಷಣಕ್ಕೇ ವಿರುದ್ಧವಿರುವಂತೆ ಏಕವಾಗಿದೆ. ಒಂದೇ ಆಗಿದೆ. ಅದು ಎರಡಿಲ್ಲದ ಒಂದು. ವೈವಿಧ್ಯಕ್ಕೆ ಅವಕಾಶವೇ ಇಲ್ಲದ ಒಂದು. ವೈವಿಧ್ಯದ ಲಕ್ಷಣವುಳ್ಳ ಸೃಷ್ಟಿಯ ಮೂಲ ಮತ್ತು ಉದ್ದೇಶ ಏಕತೆಯೇ ಆಗಿದೆ. ಅದರ ಉದ್ದೇಶ ಮೂಲದತ್ತ ಮುಖಮಾಡಿದೆ. ಉದ್ದೇಶವೂ ಮೂಲವೂ ಒಂದೇ ಆಗಿರುವುದು ಕಾಲದ ಗುಟ್ಟಿರಬೇಕು. ಇಡಿಯ ಬ್ರಹ್ಮಾಂಡವು ವರ್ತುಲಾಕಾರವಿರಲಾಗಿ ದೇಶದ ಗುಟ್ಟೂ ಅದೇ ಇರಲಿಕ್ಕೇ ಬೇಕು. ಉದ್ದೇಶವೂ ಮೂಲವೂ ಒಂದೇ ಇದ್ದಾಗ ಚಲನೆಯೊಂದು ಚಕ್ರಾಕಾರ. ಚಲನೆಯು ಚಕ್ರಾಕಾರವಿರುವುದಕ್ಕೂ ಚಕ್ರದಿಂದಲೇ ವೇಗದ ಸುಲಭ ಚಲನೆಯು ಸಾಧ್ಯವಾಗುವುದಕ್ಕೂ ಒಂದು ಸಂಬಂಧವಿರಬೇಕು. ಇರಲಿ. ಚಲಿಸಿ ಚಲಿಸಿ ತಲುಪುವುದು ಹೊರಟಲ್ಲಿಗೇ ಎಂಬುದಿಲ್ಲಿಯ ಗ್ರಹಿಕೆ.
ಸಮನ್ವಯಕ್ಕಾಗಿ ವಿವೇಕ
ಏಕದಿಂದ ಹೊರಟದ್ದು ಏಕವೇ ಆಗುವ ರೀತಿ. ಅಥವಾ ಏಕದಲ್ಲಿ ವಿಲೀನಗೊಳ್ಳುವ ರೀತಿ. ನಾಶವನ್ನು ವಿನಷ್ಟವೆನ್ನದೆ ವಿಲೀನಕ್ಕೆ ಸಂಬಂಧಿಸಿ ಲಯವೆಂದು ಗುರುತಿಸಿದ ಪರಂಪರೆ ಇಲ್ಲಿಯದು. ಇದರ ಮೂಲಕ ಸೃಷ್ಟಿಯು ತನ್ನ ಒಟ್ಟಾರೆ ಸ್ಥಿತಿಯನ್ನು ಸೂಚಿಸುತ್ತಿರುವುದು ಏಕತೆಯೆಂದೇ. ವೈವಿಧ್ಯವೂ ಇರುವುದು ಏಕತೆಯನ್ನು ಸಾಧಿಸಲೆಂದೇ. ಅಂದರೆ; ಸೃಷ್ಟಿಯು ತನ್ನ ವಿವೇಕೀ ಘಟಕವಾದ ಮನುಷ್ಯನಿಗೆ ಸೂಚಿಸುತ್ತಿರುವುದು ಏಕತೆಯನ್ನು ಸಾಧಿಸಬೇಕೆಂದು. ವೈವಿಧ್ಯದಲ್ಲಿ ಏಕತೆಯನ್ನು ನೋಡಲು ಸಾಧಿಸಬೇಕಾದುದು ವೈವಿಧ್ಯದ ನಡುವೆ ಸಮನ್ವಯವನ್ನು. ಸೃಷ್ಟಿಯ ವೈವಿಧ್ಯದಲ್ಲಿರುವುದು ಸಮನ್ವಯವೇ. ವೈವಿಧ್ಯವನ್ನು ಹಾಳುಗೆಡವದೇ ಇರುವ ಸಮನ್ವಯ.
ಸೃಷ್ಟಿಯ ಪರಿಣಾಮವಾದ ಭೌತಿಕ ಬದುಕಿನ ಸಮನ್ವಯವನ್ನು ಸಾಧಿಸಬೇಕಾದುದು ಏಕ ಮತ್ತು ಲಯಗಳ ಈ ವಾಙ್ಮಯ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡೇ. ಯಾಕೆ ಈ ಮಾತೆಂದರೆ; ಸಮನ್ವಯವನ್ನು ಸಾಧಿಸಹೊರಡುವಾಗ ಒಲ್ಲದ, ಆಕ್ಷೇಪಿಸುವ ಮಂದಿ ಇದ್ದೇ ಇರುತ್ತಾರೆ. ತೋಳೇರಿಸಿ ಸಿದ್ಧವಿರುವವರೂ ಇರುತ್ತಾರೆ. ಮನವರಿಕೆಯ ಯಾವುದೇ ಹಾರ್ದಿಕ ಶೈಲಿಯ ಮಾತಿಗೂ ಕವಡೆಕಾಸಿನ ಬೆಲೆಯನ್ನೂ ನೀಡದವರು ಇದ್ದೇ ಇರುತ್ತಾರೆ. ಆಗ ಸಮನ್ವಯದ ದಾರಿಯಲ್ಲಿ ಸಾಗುವುದೆಂತು ಎಂಬ ಪ್ರಶ್ನೆ ಎದುರಾಗುತ್ತದೆ. ಸಮನ್ವಯವನ್ನು ಅತೀವ ಮುಗ್ಧವಾಗಿ ಸಾಧಿಸಬೇಕೇನೋ ಹೌದು, ಇಂಥ ಸಂಕೀರ್ಣ ಸನ್ನಿವೇಶವನ್ನು ಸಮನ್ವಯದ ಸ್ಫೂರ್ತಿಗೆ ಧಕ್ಕೆಯಾಗದಂತೆ ಯಶಃಪ್ರದವಾಗಿ ಹಾಗೂ ಪರಿಣಾಮಕಾರಿಯಾಗಿ ಸಾಧಿಸಲುಬೇಕಾದ ವಿವೇಕ, ಬಲ ಇತ್ಯಾದಿಗಳೂ ಅವಶ್ಯ ಬೇಕು ಎನ್ನುವುದೂ ಅಷ್ಟೇ ಹೌದು.
ಅಹಿಂಸೆಯಿಂದ ಜೀವಸುಧಾರಣೆ
ಈ ನಿಟ್ಟಿನಲ್ಲಿ ಈ ಮಣ್ಣಿನಲ್ಲಿ ನಡೆದ ಪ್ರಯೋಗಗಳು ಹಲವು. ಸಮನ್ವಯದ ಮೂಲಕ ಏಕತೆಯನ್ನು ಕಂಡುಕೊಳ್ಳುವುದೇ ಅವುಗಳ ಆತ್ಯಂತಿಕ ಲಕ್ಷ್ಯ. ಅಹಿಂಸೆಯನ್ನು ಮುಖ್ಯವಾಗಿಸಿ ತತ್ತ್ವಜ್ಞಾನವನ್ನು ಉಣಬಡಿಸಿದ ಬುದ್ಧನ ಭೂಮಿಯೂ ಹೌದಿದಷ್ಟೆ! ಆತ; ಈ ಅಹಿಂಸಾಮಾರ್ಗವನ್ನು ಹೊಸದಾಗಿ ಶೋಧಿಸಿದ್ದಲ್ಲ, ಇಲ್ಲಿಯ ತಾತ್ತ್ವಿಕ ಪರಂಪರೆಯಿಂದಲೇ ಸ್ವೀಕರಿಸಿದ್ದು. ಆತನನ್ನು ಅನುಕರಿಸಿ ಇನ್ನೂ ಕೆಲವರು ಆ ನಿಟ್ಟಿನಲ್ಲಿ ಪ್ರಯೋಗಗಳನ್ನು ಮಾಡಿದರು. ಆತ ತನ್ನ ತಾತ್ತ್ವಿಕ ಉಪದೇಶಗಳನ್ನು ವೈಯಕ್ತಿಕ ನೆಲೆಯಲ್ಲಿ ನೀಡಿದ್ದು. ಅಂದರೆ ಅಲ್ಲೊಂದು ಜೀವಸುಧಾರಣೆಯ ಲಕ್ಷ್ಯವಿತ್ತು. ರಾಜ್ಯಸುಧಾರಣೆಗೆ ಇಲ್ಲವೇ ವ್ಯವಸ್ಥಾಸುಧಾರಣೆಗೆ ಅದು ಅಷ್ಟೇ ಪರಿಣಾಮಕಾರಿ ದಾರಿ ಎಂಬ ಖಾಚಿತ್ಯವಿದ್ದು ಉಪದೇಶಿಸಿದನೆಂದು ಹೇಳಬರುವುದಿಲ್ಲ. ಸಾಮಾನ್ಯವಾಗಿ ತಾತ್ತ್ವಿಕ ಉಪದೇಶಗಳು ಜೀವಸುಧಾರಣೆಯ ಲಕ್ಷ್ಯವನ್ನೇ ಹೊಂದಿರುತ್ತವೆ. ಜೀವಸುಧಾರಣೆಯ ಮೂಲಕ ರಾಜ್ಯಸುಧಾರಣೆ ಇತ್ಯಾದಿ ಸಮಷ್ಟಿಯ ನೆಲೆಯಲ್ಲಿ ತೊಡಗುವುದು ನಡೆಯುತ್ತದೆ. ಅಹಿಂಸೆಯಿಂದ ಜೀವಸುಧಾರಣೆ ಸಾಧ್ಯವಾದೀತು. ಹಾಗೆ ಸುಧಾರಣೆಗೊಂಡ ಜೀವದಿಂದ ರಾಜ್ಯಸುಧಾರಣೆಗೆ ಕೆಲವೊಮ್ಮೆ ಹಿಂಸೆಯ ಮೂಲಕ ಉಪಕ್ರಮಿಸುವುದೂ ಅನಿವಾರ್ಯವಾದೀತು.
ಆಧುನಿಕ ಚಿಂತನೆಯು ಜೀವಸುಧಾರಣೆಗಿಂತ ರಾಜ್ಯಸುಧಾರಣೆಗೆ ಹೆಚ್ಚು ಒತ್ತು ಕೊಟ್ಟಂತಿದೆ. ಅದನ್ನು ಶಿಕ್ಷಣದ ವಿನ್ಯಾಸದಲ್ಲಿಯೇ ನೋಡಬಹುದು. ಅಲ್ಲಿ ಮೌಲ್ಯಕ್ಕೆ ಒತ್ತಿಲ್ಲ, ಒತ್ತೆಲ್ಲ ವಿದ್ಯಾರ್ಥಿಯನ್ನು ಉದ್ಯೋಗಿಯಾಗಿಸುವಲ್ಲಿಯೇ. ಎಲ್ಲರಿಗೂ ಉದ್ಯೋಗ ನೀಡಿದರೆ ರಾಜ್ಯಸುಧಾರಣೆಯ ಒಂದಂಶ ಪೂರ್ತಿಗೊಂಡಂತೆ ಎಂಬ ನಿಲುವು.
ಅಹಿಂಸೆಯಿಂದ ರಾಜ್ಯಸುಧಾರಣೆಗೆ ತೊಡಗಿದ ಒಂದು ಪ್ರಯೋಗ ಇಲ್ಲಿ ನಡೆದುದೀಗ ಇತಿಹಾಸ. ಆ ಪ್ರಯೋಗ ನಡೆದುದು ಪರಕೀಯ ಆಂಗ್ಲರ ಮೇಲೆ. ಈ ಪ್ರಯೋಗದ ಮಾನಸಿಕತೆಯು ಅದೆಷ್ಟರ ಮಟ್ಟಿಗೆ ಹೋಗಿತ್ತೆಂದರೆ; ನಮಗೆ ಪರಕೀಯರಿಂದ ಪೂರ್ಣ ಸ್ವಾತಂತ್ರ್ಯ ಬೇಕಾಗಿಲ್ಲ, ಅವರಡಿಯಲ್ಲಿ ಶಾಸನಮಾಡುವ ಹಕ್ಕಷ್ಟೇ ಸಿಕ್ಕಿದರೆ ಸಾಕು ಎಂಬಲ್ಲಿಯವರೆಗೆ. ಸ್ವದೇಶೀ ಆಂದೋಲನವನ್ನು ವ್ಯಾಪಕಗೊಳಿಸಿದ ನೇತೃತ್ವದಿಂದಲೇ ‘ಸ್ವ’ತ್ವಕ್ಕೆ ವಿರೋಧಿಯಾದ ಇಂಥ ನಿಲುವೊಂದು ಅಭಿವ್ಯಕ್ತವಾಯಿತೆನ್ನುವುದು ಅಚ್ಚರಿಯ ಸಂಗತಿಯೇ. ಆದರೂ ಇದು ಕಳೆದ ಶತಮಾನದ ಸತ್ಯಸ್ಯ ಸತ್ಯ.
ಅಹಿಂಸೆಯಿಂದ ವೈರಿಯನ್ನು ಬದಲಾಯಿಸಬಹುದು ಎಂಬ ಕಾಲ್ಪನಿಕ ಆಶಾವಾದದಲ್ಲಿ ಹುಟ್ಟಿಕೊಂಡ ಪ್ರಯೋಗವದು. ಈ ಆಶೆ ಒಳ್ಳೆಯದೇ. ಜತೆಗೆ, ಅದು ವ್ಯಾವಹಾರಿಕವೇ ಅನ್ನುವ ಪ್ರಶ್ನೆಯೂ ಕಾಡಬೇಕು. ವೈರಿಯನ್ನು ಬದಲಾಯಿಸೋಣವಂತೆ, ಸೃಷ್ಟಿಯು ನಮ್ಮನ್ನು ಪ್ರಚೋದಿಸಿದ ಸಮನ್ವಯಮಾರ್ಗಕ್ಕೆ ಅದು ಪೂರಕವೂ ಹೌದಷ್ಟೆ!. ಜತೆಗೆ, ನಮ್ಮ ಸ್ವಾತಂತ್ರ್ಯದ ಬಹುಮುಖ್ಯ ಭಾಗವನ್ನು ಪರಕೀಯರ ಕೈಯಲ್ಲಿಡುವ ಬಗೆಯಲ್ಲಿ ಸ್ವತ್ವವನ್ನು ಬಲಿಗೊಡಕೂಡದು ಎಂಬ ಎಚ್ಚರಿಕೆಯೂ ಇರಬೇಕು.
ಅಪೂರ್ಣ ಸ್ವರಾಜ್ಯ ಬೇಡಿಕೆ!
1906ರ ಕಲ್ಕತ್ತ ಅಧಿವೇಶನದಲ್ಲಿ ಆಂಗ್ಲ ಸಾಮ್ರಾಜ್ಯಾಂತರ್ಗತ ಸ್ವಾತಂತ್ರ್ಯದ ಬೇಡಿಕೆಯನ್ನು ಇಡಲಾಯಿತು. ಆಗ ಪೂರ್ಣ ಸ್ವರಾಜ್ಯದ ಹಕ್ಕನ್ನು ಮಂಡಿಸಿದ ಇನ್ನೊಂದು ಗುಂಪು ತೀವ್ರಗಾಮಿಯೆನಿಸಿಕೊಂಡಿತು, ಏನೋ ಭಾರೀ ಅಪರಾಧ ಮಾಡಿದವರೆಂಬಂತೆ. ಆಂಗ್ಲಾಧೀನ ಸ್ವರಾಜ್ಯದ ಬೇಡಿಕೆಯಿಟ್ಟ ಅಹಿಂಸಾವಾದಿ ಗುಂಪು ಮಂದಗಾಮಿಯೆನಿಸಿಕೊಂಡಿತು, ತಮಗಿಂತ ಸಹಿಷ್ಣುಗಳು ಇನ್ನಿಲ್ಲವೆಂಬಂತೆ.
ತಮ್ಮ ಪ್ರತಿಮೆಯೆಂತಿರಬೇಕೆಂಬ ಚಿಂತೆಯೇ ಕಾಡಿದರೆ ಸ್ವತ್ವವನ್ನು ಬಲಿಗೊಡುವುದೇ ಆಯ್ಕೆಯಾಗುತ್ತದೆ. ಸ್ವತ್ವವನ್ನು ಬಲಿಗೊಡುವುದು ಸೃಷ್ಟಿವಿರೋಧಿಯೂ ಹೌದು. ತನ್ನ ವೈವಿಧ್ಯದ ಗುಣಲಕ್ಷಣಗಳ ಮೂಲಕ ಪ್ರತಿಯೊಂದು ರಾಷ್ಟ್ರಕ್ಕೂ ಅದರದ್ದೇ ಆದ ಸ್ವತ್ವವನ್ನು ಅದು ದಯಪಾಲಿಸಿದೆ. ಆ ಸ್ವತ್ವವನ್ನು ಕಂಡುಕೊಂಡು ಬದುಕುವುದೇ ಪ್ರತಿಯೊಂದು ರಾಷ್ಟ್ರದ ಕರ್ತವ್ಯವಾಗಿದೆ. ಪೂರ್ಣ ಸ್ವಾತಂತ್ರ್ಯವಿಲ್ಲದೆ ಸ್ವತ್ವವನ್ನು ಬದುಕುವುದೆಂತು!.
ಅಚ್ಚರಿ ಎಂದರೆ 1906ಕ್ಕಿಂತ ಮುಂಚೆ ನಮ್ಮ ಸ್ವಾತಂತ್ರ್ಯಹೋರಾಟವು ಆಂಗ್ಲಾಧೀನ ಸ್ವರಾಜ್ಯಕ್ಕಿಂತಲೂ ಭಿನ್ನವಾದ ಆಡಳಿತ ಸುಧಾರಣೆಯ ಬೇಡಿಕೆಗಳೊಂದಿಗೆ ಸಾಗಿತ್ತು. ಕ್ರಾಂತಿಕಾರಿಗಳ ಹೋರಾಟದಲ್ಲಿ ಸ್ವರಾಜ್ಯದ ಸ್ಪಷ್ಟತೆಯೂ ಇತ್ತು, ಗಟ್ಟಿತನವೂ ಇತ್ತೆನ್ನಿ. ಹೋಗಲಿ, ಆಂಗ್ಲರೆದುರು ಮಂದವಾಗಿ ಅಂದರೆ ಅತೀವ ವಿನೀತರಾಗಿ ಇಟ್ಟ ಬೇಡಿಕೆಯನ್ನು ಅವರು ಪೂರೈಸಿದರೆ? ಸುತರಾಂ ಇಲ್ಲ. ಆಗವರು ಸುಧಾರಣೆಯ ಹಂತಕ್ಕೆ ಬಂದಿದ್ದರು ಅಷ್ಟೇ.
1929ರ ಲಾಹೋರ್ ಅಧಿವೇಶನದಲ್ಲಿ ತೀವ್ರಗಾಮಿಗಳ ಅಭಿಮತವೇ ಮೇಲುಗೈಪಡೆದು ಪೂರ್ಣ ಸ್ವರಾಜ್ಯದ ಘೋಷಣೆ ಹೊರಬಿತ್ತು. ವೈರಿಯನ್ನು ಬದಲಾಯಿಸಬಹುದೆಂಬ ನಿಲುವಿನ ಅಹಿಂಸಾವಾದೀ ಹೋರಾಟವು ತನ್ನ ಅಸಾಮರ್ಥ್ಯವನ್ನು ಒಪ್ಪಿಕೊಂಡ ಮೊದಲ ಸಂದರ್ಭ ಅದು. ಪೂರ್ಣ ಸ್ವರಾಜ್ಯದ ಬೇಡಿಕೆಯನ್ನಿಟ್ಟರೂ ಅದನ್ನು ಅಹಿಂಸೆಯಿಂದಲೇ ಸಾಧಿಸುವೆನೆಂದು 1942ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿ ಮಾಡಿ ನೇತಾರರು ಬಂಧಿತರಾದರೆ ಉಳಿದವರು ಆಂಗ್ಲರ ಏಟುಗಳಿಗೆ ತುತ್ತಾದರು. ಸುಭಾಶ್ಚಂದ್ರ ಭೋಸರ ಐಎನ್ಎ ಪ್ರೇರಣೆಯಿಂದ ನೌಕಾದಳದ ಬಂಡಾಯ ಮತ್ತು ಅದರ ಪರಿಣಾಮವಾಗಿ ತಮ್ಮ ಆದೇಶಗಳ ಪಾಲನೆಯಾಗುತ್ತಿಲ್ಲವೆಂಬ ವಾಸ್ತವವನ್ನು ಆಂಗ್ಲರು ಅನುಭವಿಸಿದ್ದು, 1945ರಲ್ಲಿ ಪ್ರಾರಂಭಗೊಂಡ ಎರಡನೆಯ ಮಹಾಯುದ್ಧ ಮತ್ತದರಲ್ಲಿ ಆರ್ಥಿಕವಾಗಿ ಇಂಗ್ಲೆಂಡ್ ಜರ್ಜರಿತಗೊಂಡುದುದು, ವಸಾಹತು – ಸಾಮ್ರಾಜ್ಯವಾದದ ವಿರುದ್ಧ ನಿಂತ ಜಗತ್ತಿನ ಬೇರೆ ಬೇರೆ ದೇಶಗಳಿಂದ ಇಂಗ್ಲೆಂಡ್ ಒತ್ತಡಕ್ಕೊಳಗಾದುದು.. ಈಯೆಲ್ಲ ಹಿನ್ನೆಲೆಯಲ್ಲಿ ಆಂಗ್ಲರು ಸ್ವಾತಂತ್ರ್ಯ ಕೊಟ್ಟುಹೋಗಲೇಬೇಕಾಯಿತೆಂಬ ಐತಿಹಾಸಿಕ ಸತ್ಯವು ಇದೀಗ ವಿವರವಾಗಿ ಹಾಗೂ ದಾಖಲೆಸಹಿತವಾಗಿ ಬಹಿರಂಗಗೊಂಡಿದೆ.
ರಾಮನ ನಿರ್ಮಾಣ
ಅಹಿಂಸೆಯಿಂದ ರಾಜ್ಯಸುಧಾರಣೆಯಾಗಲೀ ಸ್ವರಾಜ್ಯದ ಹೋರಾಟವಾಗಲೀ ಯಶಪಡೆದ ಉದಾಹರಣೆ ಇದುವರೆಗೆ ಲಭಿಸಿಲ್ಲ. ಆಂಗ್ಲರ ವಿರುದ್ಧದ ಹೋರಾಟವನ್ನು ಹಾಗೆ ತಪ್ಪಾಗಿ ಬಿಂಬಿಸಲಾಗಿತ್ತು. ಅದು ಅಪ್ಪಟಸುಳ್ಳೆಂದು ಈಗಾಗಲೇ ಸಾಬೀತಾಗಿದೆ. ಪ್ರೀತಿಯಿಂದಲೇ ಜಗತ್ತನ್ನು ಗೆಲ್ಲಬೇಕೆಂಬ ಮಾತು ನಮ್ಮ ಪರಂಪರೆಯದೇ. ಮತ್ತದು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಸಾತ್ತ್ವಿಕ ಸಮೂಹದೊಂದಿಗೆ ಸಾಧ್ಯವಾಗತಕ್ಕ ಸಂಗತಿ. ಸತ್ಯದ ಒರೆಗಲ್ಲಾಗಿ ಪರಿಗಣಿಸಲ್ಪಡುವ ನಮ್ಮ ಮಹಾಕಾವ್ಯಗಳು ಈ ನಿಟ್ಟಿನಲ್ಲಿ ನಮ್ಮನ್ನು ಹೆಚ್ಚು ಸ್ಪಷ್ಟತೆಗೆ ಒಯ್ಯಬಲ್ಲವು.
ರಾಮ ಯುದ್ಧಾಪೇಕ್ಷಿಯಂತೂ ಸುತರಾಂ ಅಲ್ಲ. ತನ್ನ ಪತ್ನಿಯನ್ನು ಅಪಹರಿಸಿದ್ದು ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ಬಿಟ್ಟುಕೊಡಲಾರೆ ಎಂದು ಪಟ್ಟುಹಿಡಿದು ನಿಜ ರಾಕ್ಷಸತನವನ್ನು ಮೆರೆದ ರಾವಣನ ಬಳಿ ಆತನಿಗೆ ಯುದ್ಧವೊಂದನ್ನು ಬಿಟ್ಟು ಬೇರೆ ಆಯ್ಕೆಗಳೇ ಇರಲಿಲ್ಲ. ಎರಡೆರಡು ಸಂಧಾನಪ್ರಯತ್ನಗಳ ಮೂಲಕ ಆತ ಯುದ್ಧತಪ್ಪಿಸುವ ಇನ್ನಿಲ್ಲದ ಸಾಧನೆಯನ್ನು ಮಾಡಿದ್ದ. ಇದಿರಿಲ್ಲವೆಂಬ ರಾಮಬಾಣದ ಖ್ಯಾತಿಯ ರಾಮನ ಸಂಧಾನಸಾಧನೆ ಇನ್ನಿಲ್ಲದ ವೈಫಲ್ಯವನ್ನು ಹೊಂದಿತು. ಆತನದ್ದು ಯಾಕೆ ಇನ್ನಿಲ್ಲದ ಸಾಧನೆಯೆಂದರೆ; ತನ್ನ ಪತ್ನಿಯನ್ನು ಕದ್ದೊಯ್ದವನ ಜತೆಗೆ ಹಿಂಸೆ ಬೇಡವೆಂದು ಸಂಧಾನದ ಮೂಲಕ ಅಹಿಂಸಾಮಾರ್ಗದಲ್ಲಿ ಹೊರಟನಲ್ಲ, ಇದು ಯಾರಿಂದಲೂ ಕಲ್ಪನೆಗೂ ಸಾಧ್ಯವಾಗದ ಹೆಜ್ಜೆ. ಹೆಂಬೇಡಿಯಿಂದಲೂ ಸಾಧ್ಯವಾಗದ ಅಂಥ ಅಹಿಂಸೆಯ ದಾರಿಯನ್ನು ತುಳಿದವ ಸರ್ವಸಮರ್ಥ ರಾಮ.
ರಾಮ ಅಯೋಧ್ಯೆಯಿಂದ ಬಂದವ. ತನ್ನ ಹೆಸರಿನ ಮೂಲಕ ಸೂಚಿಸುತ್ತಿರುವುದು ಅಯೋಧ್ಯೆ ಯಾರೂ ಜಯಿಸಲಾಗದ ನಾಡೆಂದು. ಯಾರೂ ಜಯಿಸಲಾಗದ ನಾಡಿನಿಂದ ಬಂದ ರಾಮನಿಂದ ಅಹಿಂಸೆಯ ಮೂಲಕ ಲೋಕರಾವಣನೆನಿಸಿದವನನ್ನು ಜಯಿಸುವ ಪ್ರಯತ್ನ. ಅಹಿಂಸೆಯಿಂದ ವೈರಿಯನ್ನು ಬದಲಾಯಿಸಬಹುದು ಎಂಬ ವಾದದ ದಾರಿಯಲ್ಲಿ ಪ್ರಯತ್ನ. ಅಹಿಂಸೆಗೆ ಶರಣಾಗಿ ಬದಲಾಗುವ ವೈರಿಗಳೂ ಇರುತ್ತಾರೆ. ಜತೆಗೆ, ಬದಲಾಗದ ವೈರಿಗಳೂ ಇರುತ್ತಾರೆ ಎಂಬುದೂ ಅಷ್ಟೇ ಸತ್ಯ. ಅಹಿಂಸೆಗೆ ಧರ್ಮದ ಲಕ್ಷ್ಯವಿದ್ದಾಗ ಹಾಗೂ ಸತ್ಯದ ಕುರಿತಾದ ವಿವೇಕವಿದ್ದಾಗ ಅದು ರಾಮನಂಥವನನ್ನು ತಯಾರುಮಾಡುತ್ತದೆ.
ಮಿತಿಯುಳ್ಳ ಅಹಿಂಸೆ
ರಾಮ ಅಹಿಂಸಕ ಹೌದು, ಅದಕ್ಕಿಂತ ಮುಖ್ಯವಾಗಿ ಧರ್ಮಿ. ಧರ್ಮಕ್ಕಾಗಿ ಅಹಿಂಸಕ. ಧರ್ಮಕ್ಕಾಗಿ ಅಹಿಂಸೆಯೂ ಒಂದು ದಾರಿ, ಸತ್ಯವೂ (ದೃಗ್ಗೋಚರ ಸತ್ಯ, ಆತ್ಯಂತಿಕ ಸತ್ಯವಲ್ಲ) ಒಂದು ದಾರಿ. ಅನಿವಾರ್ಯ ಸನ್ನಿವೇಶದಲ್ಲಿ ಹಿಂಸೆಯೂ ಧರ್ಮದ ದಾರಿಯಾಗಬಲ್ಲುದು, ಅಸತ್ಯವೂ ಧರ್ಮದ ದಾರಿಯಾಗಬಲ್ಲುದು. ಅಹಿಂಸಾಮಾರ್ಗದಲ್ಲಿ ಯಾರೂ ಕ್ರಮಿಸಲಾಗದ ರೀತಿಯಲ್ಲಿ ಸಾಗಿಯೂ ಅಂಥ ರಾಮನೇ ವಿಫಲನಾದನೆಂದರೆ ಅದು ಅಹಿಂಸೆಯ ಮಿತಿಯನ್ನು ಸೂಚಿಸುತ್ತದೆ. ಅಹಿಂಸೆಗೆ ಮಿತಿಯಿದೆ ಸರಿ. ಆಯ್ಕೆಗೆ ಮಿತಿಯಿಲ್ಲ. ಇರಕೂಡದು. ಧರ್ಮವು ಲಕ್ಷ್ಯವಾದಾಗ ಆಯ್ಕೆಯು ಮಿತಿಯನ್ನು ಕಳಕೊಳ್ಳುತ್ತದೆ. ಗುರಿಯಷ್ಟೇ ದಾರಿಯೂ ಮುಖ್ಯ ಎಂಬ ವಾದವಿದೆ. ತುಂಬಾ ಒಳ್ಳೆಯ ವಾದವೇ. ಆದರೆ ಇದು ವಾದ ಅಷ್ಟೇ. ಎಲ್ಲವೂ ಸರಿಯಿದ್ದಾಗ ಈ ವಾದವೂ ಸರಿಯೇ ಇರುತ್ತದೆ. ಅಹಿಂಸೆಯಾಗಲೀ ಸತ್ಯವಾಗಲೀ ಅಥವಾ ಉತ್ತಮವೆನಿಸುವ ಇನ್ನಾವುದೇ ದಾರಿಯಾಗಲೀ ಧರ್ಮಲಕ್ಷ್ಯವನ್ನು ಈಡೇರಿಸುವಲ್ಲಿ ವಿಫಲವಾದಾಗ ಹಾಗೂ ಅಧರ್ಮಕ್ಕೆಡೆಮಾಡಿಕೊಟ್ಟಾಗ ಈ ವಾದವೂ ಬಿದ್ದುಹೋಗುತ್ತದೆ.
ರಾವಣನದು ಹಿಂಸೆಯ ದಾರಿ ಎನ್ನಲಾಗುತ್ತದೆ. ತಪ್ಪು ಕಥನವಿದು. ಆತನದು ಕ್ರೌರ್ಯದ ದಾರಿ. ಕ್ರೌರ್ಯವನ್ನು ಹಿಂಸೆಯೆಂದು ಬಣ್ಣಿಸುವಲ್ಲಿಯೇ ಸಮಸ್ಯೆಯಿದೆ. ಧರ್ಮಲಕ್ಷ್ಯವನ್ನು ಪೂರೈಸಲು ಹಿಂಸೆಯು ದಾರಿಯಾಗಬಲ್ಲುದು, ಕ್ರೌರ್ಯವಲ್ಲ. ಕ್ರೌರ್ಯವು ಏನಿದ್ದರೂ ದುರುಳರ ಸಾಧನವಷ್ಟೇ ಆದೀತು. ದುರುಳರು ಧರ್ಮವಿಹೀನರೇ ಸರಿ. ಸ್ವಾರ್ಥಸಾಧನೆಗಾಗಿ ಏನನ್ನೂ ಮಾಡಲು ಹೇಸದ ರಾವಣನ ಲಕ್ಷ್ಯವು ಧರ್ಮವಂತೂ ಆಗಿರಲಿಲ್ಲ.
ಹೊಂದಾಣಿಕೆಯ ಸ್ಫೂರ್ತಿ
ಅಹಿಂಸೆಯ ದಾರಿಯೇ ರಾಮನ ಮೊದಲ ಆಯ್ಕೆ. ಮತ್ತದು ಆತನಿಗೆ, ಕೊಟ್ಟ ಕೊನೆಯ ಆಯ್ಕೆಗಿಂತ ಮುಂಚಿನ ತನಕದ ಆಯ್ಕೆ ಕೂಡಾ. ಅದು ಫಲಿಸುವುದಿಲ್ಲವೆಂದಾದಾಗ ಕೊಟ್ಟ ಕೊನೆಯ ಆಯ್ಕೆಯಾಗಿ ಅವನ ಮುಂದೆ ಇದ್ದುದು ಯುದ್ಧ. ಅದು ಧರ್ಮದ ನೆಲೆಯಲ್ಲಿ ನಡೆದ ಯುದ್ಧ. ಪರಸ್ತ್ರೀಯನ್ನು ಕದ್ದೊಯ್ದವನನ್ನು ಶಿಕ್ಷಿಸಬೇಕು. ಪಶ್ಚಾತ್ತಾಪವೂ ಒಂದು ಶಿಕ್ಷೆಯೇ. ಅದು ಸ್ವಯಂಶಿಕ್ಷಣವಿದ್ದಂತೆ. ರಾವಣನು ಪಶ್ಚಾತ್ತಾಪಟ್ಟು ಸೀತೆಯನ್ನೊಪ್ಪಿಸುವಂತೆ ಎಲ್ಲಾ ಪ್ರಯಾಸಗಳನ್ನೂ ರಾಮ ಗೈದಿದ್ದ. ಚತುರೋಪಾಯಗಳಲ್ಲಿ ಕೊನೆಗೆ ಆತನ ಮುಂದಿದ್ದುದು ದಂಡವೇ. ರಾವಣನಿಗೆ ನೀಡಬೇಕಾಗಿದ್ದ ದಂಡವು ಯುದ್ಧವೇ ಆಗಿತ್ತು. ಮತ್ತದು ರಾವಣನದೇ ಆಯ್ಕೆ ಕೂಡಾ. ರಾವಣನಿಗೆ ಯುದ್ಧವೊಂದು ದ್ವೇಷಸಾಧನೆಯ ದಾರಿ. ರಾಮನಿಗದು ದುರುಳರನ್ನು ಶಿಕ್ಷಿಸುವ ದಾರಿ.
ಹಾಗೆಂದು; ರಾವಣನಿಗೆ ರಾಮನನ್ನು ದ್ವೇಷಿಸಲು ಯಾವುದೇ ಕಾರಣಗಳಿಲ್ಲ. ಆದರೂ ದ್ವೇಷಿಸಿದ. ರಾಮನಿಗೆ ರಾವಣನನ್ನು ದ್ವೇಷಿಸಲು ಪತ್ನಿಯ ಅಪಹರಣಕ್ಕಿಂತ ಬೇರೆ ಕಾರಣ ಬೇಕೇ? ಆದರೂ ದ್ವೇಷಿಸಲಿಲ್ಲ!. ಪರಸ್ತ್ರೀಯನ್ನು ಕದ್ದೊಯ್ದು ಆಕೆಯ ಪತಿಯನ್ನು ಯುದ್ಧೋಪಾದಿಯಲ್ಲಿ ದ್ವೇಷಿಸಬಲ್ಲವ ರಾವಣ. ತನ್ನ ಪತ್ನಿಯನ್ನು ಕದ್ದೊಯ್ದವನಿಗೂ ಪಶ್ಚಾತ್ತಾಪದ ಶಿಕ್ಷೆಯ ಮೂಲಕ ಅಹಿಂಸೆಯ ಅವಕಾಶ ನೀಡಬಲ್ಲವ ರಾಮ.
ಶಿಕ್ಷೆಯು ಅಂದರೆ ಶಿಕ್ಷಣವು ಸಹಾಯವಾಗಬೇಕಾದುದು ತನ್ನ ಸ್ವತ್ವವನ್ನು ಕಂಡುಕೊಳ್ಳಲು. ಧರ್ಮಲಕ್ಷ್ಯವನ್ನು ಈಡೇರಿಸುವುದರಲ್ಲಿದೆ ಸ್ವತ್ವದ ಅಭಿವ್ಯಕ್ತಿ. ಇದು ಸಜ್ಜನರಿಗೆ ಬೇರೆ ಅಲ್ಲ, ದುರುಳರಿಗೆ ಬೇರೆ ಅಲ್ಲ. ಸ್ವಭಾವದಂತೆ ಸ್ವತ್ವವಲ್ಲವೇ ಎಂಬ ಪ್ರಶ್ನೆಯೆದ್ದೀತು. ರಾವಣನು ತನ್ನ ಸ್ವಭಾವದಂತೆ ನಡಕೊಂಡಿದ್ದಾನೆ, ಅಲ್ಲಿಗೆ ಆತನ ಸ್ವತ್ವವು ಪ್ರಕಟಗೊಂಡಂತಾಗಿದೆ, ಮತ್ತೇಕೆ ಆತನ ಸ್ವತ್ವದ ಕುರಿತಾದ ಕಾಳಜಿ ಎಂಬ ಪ್ರಶ್ನೆಯೆದ್ದೀತು. ಸೃಷ್ಟಿಯ ವೈವಿಧ್ಯದ ಮೂಲವು ಏಕವಾಗಿದೆ ಹಾಗೂ ಲಕ್ಷ್ಯವು ಏಕತೆಯಾಗಿದೆ. ಸೃಷ್ಟಿಯ ಏಕತೆಯೇ ಧರ್ಮವಾಗಿದೆ. ಧರ್ಮ – ಬರಿಯ ಮಾನವನ ಏಕತೆ ಅಷ್ಟೇ ಅಲ್ಲ, ಸಮಗ್ರ ಸೃಷ್ಟಿಯ ಏಕತೆ. ವೈವಿಧ್ಯವನ್ನು ವೈರುಧ್ಯವಾಗಿ ಪರಿಗಣಿಸಿದಾಗ ಏಕತೆಯ ಲಕ್ಷ್ಯವು ಕಾಣೆಯಾಗುತ್ತದೆ. ಏಕತೆಯ ಲಕ್ಷ್ಯವನ್ನೀಡೇರಿಸಲು ಬೇಕಾದುದು ಸಮನ್ವಯ.
ಸಮಷ್ಟಿಯ ಘಟಕ
ರಕ್ಕಸತನವು ದುರುಳತನವು ಯಾರದ್ದೇ ಧರ್ಮವಾಗದು, ಹಾಗಾಗಿ ಸ್ವತ್ವವಾಗದು. ರಾವಣನ ದುರುಳತನಕ್ಕೆ ಅನಿವಾರ್ಯವಾಗಿ ಇಲ್ಲವೇ ಸಹರ್ಷವಾಗಿ ಸಹಕರಿಸಿದ ಎಲ್ಲರೂ ತುಳಿದುದು ಕ್ರೌರ್ಯದ ದಾರಿಯನ್ನೇ. ರಾವಣನ ತಮ್ಮನಾಗಿಯೂ ವಿಭೀಷಣ ತುಳಿದುದು ಧರ್ಮಲಕ್ಷ್ಯದ ದಾರಿಯನ್ನು, ಮೇಲ್ನೋಟಕ್ಕೆ ಅದು ಸ್ವಕೀಯರ ವಿರುದ್ಧದ ದಾರಿಯೆನಿಸಿದರೂ, ಸ್ವದೇಶದ ವಿರುದ್ಧದ ದಾರಿಯೆನಿಸಿದರೂ. ಆಂಗ್ಲರ ವಿರುದ್ಧದ ಭಾರತೀಯರ ಹೋರಾಟದಲ್ಲಿ ಕೆಲವು ಆಂಗ್ಲರೂ ಕೈಜೋಡಿಸಿದ್ದರು. ಅವರ ಹೋರಾಟವನ್ನು ಸ್ವದೇಶವಿರೋಧಿಯೆನ್ನಲಾಗದು. ಅದೇನಿದ್ದರೂ ಅಧರ್ಮವಿರೋಧಿ.
ಸೃಷ್ಟಿಯ ಸ್ವತ್ವ ಏಕತೆ. ವಿವಿಧತೆಯಲ್ಲಿ ಅದರ ಅಭಿವ್ಯಕ್ತಿ. ಪ್ರತಿಯೊಬ್ಬರ ಅಭಿವ್ಯಕ್ತಿಯೂ ವೈವಿಧ್ಯಮಯ. ಆದರೆ ಅವೆಲ್ಲವೂ ಪರಸ್ಪರ. ಈ ಪಾರಸ್ಪರಿಕತೆ ಇಲ್ಲದೇ ಹೋದಾಗ ಅಭಿವ್ಯಕ್ತಗೊಂಡದ್ದು ಸ್ವತ್ವವಾಗದು, ಸ್ವತ್ವದ ತೋರಿಕೆಯಷ್ಟೆ ಆದೀತು. ಸೃಷ್ಟಿಗಿರುವಂತೆ ಸಮಷ್ಟಿಗೂ ಸ್ವತ್ವವಿದೆ. ಅದು ತನಗೆ ಸಂಬಂಧಿಸಿದ ವ್ಯಕ್ತಿಗಳ ಮೂಲಕ ಅಭಿವ್ಯಕ್ತಿ ಪಡೆಯುತ್ತದೆ. ಮನುಷ್ಯನೊಬ್ಬ ತನಗೆ ಸಂಬಂಧಿಸಿದ ಸಮಷ್ಟಿಯ ಅವಿಭಾಜ್ಯ ಘಟಕ. ಮನೆಯಿಂದ ರಾಷ್ಟ್ರದವರೆಗೆ ಸಮಷ್ಟಿಯ ಹರಹು ವ್ಯಾಪಿಸಿದೆ. ಮತ್ತವೆಲ್ಲವೂ ಪರಸ್ಪರ ಇವೆ. ಸಮಷ್ಟಿಯು ಸೃಷ್ಟಿಗೆ ಪೂರಕ. ಹಾಗಾಗಿ ಯಾವುದೇ ಘಟಕದ ಸ್ವತ್ವವು ಇರುವುದು ಪರಸ್ಪರ ಪೂರಕವೇ. ಅವುಗಳ ಅಭಿವ್ಯಕ್ತಿಯಲ್ಲಿರುವುದು ವೈವಿಧ್ಯ.
ವಿಭೀಷಣನ ಸ್ವತ್ವವು ಧರ್ಮನಿಷ್ಠವಾಗಿ ರಾಮನಿಗೆ ಪೂರಕವಾಗಿ ಅಭಿವ್ಯಕ್ತವಾಯಿತು. ಉಳಿದ ರಕ್ಕಸರದು ರಾವಣನಿಗೆ ಪೂರಕವಾಗಿ ಅಧರ್ಮನಿಷ್ಠವಾಯಿತು. ಮನವರಿಕೆಯ ದಾರಿಗಳೆಲ್ಲವೂ ನಿಷ್ಫಲವಾದಾಗ ಅವರನ್ನು ರಾವಣನ ಜತೆಗೆ ಯುದ್ಧದ ಮೂಲಕ ಶಿಕ್ಷಿಸುವುದು ಅನಿವಾರ್ಯವಾಯಿತು. ರಾಮನ ಸ್ವತ್ವವು ಅಯೋಧ್ಯೆಗೆ ಸಂಬಂಧಿಸಿದುದು. ವಿಭೀಷಣನ ಸ್ವತ್ವವು ಲಂಕೆಗೆ ಸಂಬಂಧಿಸಿದುದು. ಇವರಿಬ್ಬರಲ್ಲಿ ಅವು ಪರಸ್ಪರ ಪೂರಕಗೊಂಡವು. ರಾವಣನ ಸ್ವತ್ವವನ್ನು ಲಂಕೆಗೆ ಸಂಬಂಧಿಸಿದ್ದು ಎಂದುಕೊಳ್ಳುವಲ್ಲಿ ಸಮಸ್ಯೆಯಿದೆ. ಲಂಕೆ ಆತನದಲ್ಲ, ಕುಬೇರನದು. ಆತನಿಂದದು ಅಪಹೃತವಾಯಿತು. ಆತನಿಂದ ಲಂಕೆಗೆ ಕೆಟ್ಟ ಹೆಸರೂ ಬಂತು. ಲಂಕೆಯ ಸ್ವತ್ವವು ಪುನಃ ಪ್ರಕಟಗೊಳ್ಳಲು ವಿಭೀಷಣನ ತನಕ ಕಾಯಬೇಕಾಯಿತು.
ಮನುಷ್ಯ ಒಂದು ಪ್ರತ್ಯೇಕ ಅಸ್ತಿತ್ವವಲ್ಲ. ಆತ, ಪಾರಸ್ಪರಿಕವಾಗಿರುವ ಸಮಷ್ಟಿ – ಸೃಷ್ಟಿ – ಪರಮೇಷ್ಠಿಗಳ ಅವಿಭಾಜ್ಯ ಘಟಕ. ಏಕತೆಯೇ ಅವೆಲ್ಲವುಗಳ ಮೂಲ. ಅವೆಲ್ಲವುಗಳ ಒಂದು ಘಟಕವಾದ ಮನುಷ್ಯನ ಮೂಲಕವೂ ಅದು ಅಭಿವ್ಯಕ್ತಗೊಳ್ಳುತ್ತದೆ. ನಮ್ಮ ಸ್ವತ್ವದ ಸ್ವರೂಪವನ್ನು ಸಮಷ್ಟಿ ನೆಲೆಯಲ್ಲಿ ಕಂಡುಕೊಂಡು ಅಭಿವ್ಯಕ್ತಿಸಬೇಕಾದುದು ಕರ್ತವ್ಯವೇ ಆಗಿದೆ.
